ಮಂಗಳೂರು, ಏ 07 (DaijiworldNews/SM): ಮಂಗಳೂರು ಕೇಂದ್ರ ಮಾರುಕಟ್ಟೆ ಕಟ್ಟಡ ಶಿಥಿಲಗೊಂಡಿರುವುದರಿಂದ ಅಲ್ಲಿನ ವ್ಯಾಪಾರಿಗಳನ್ನು ಬೈಕಂಪಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರ ಮಾಡಲಾಗಿದೆ. ಮಂಗಳೂರು ಮಾರುಕಟ್ಟೆಯಲ್ಲಿ ಯಾವುದೇ ತರಕಾರಿ, ಹಣ್ಣು ಹಂಪಲು, ಮಾಂಸ ಮಾರಾಟ ಮಾಡದಂತೆ ನಗರ ಪಾಲಿಕೆ ಆದೇಶ ನೀಡಿದೆ. ಅದರಂತೆ, ಬೈಕಂಪಾಡಿಯಲ್ಲಿ ವ್ಯಾಪಾರ ವಹಿವಾಟು ನಡೆಸಲು ರಖಂ ವ್ಯಾಪರಸ್ಥರ ಸಂಘ ಒಪ್ಪಿದ್ದು ಬುಧವಾರದಿಂದ ವ್ಯಾಪಾರ ವಹಿವಾಟು ಆರಂಭವಾಗಲಿದೆ.
ಮಂಗಳವಾರ ಎಪಿಎಂಸಿ ಕಚೇರಿಯಲ್ಲಿ ಶಾಸಕ ಡಾ.ಭರತ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವ್ಯಾಪಾರಿಗಳು ಭಾಗವಹಿಸಿ ವಿವಿಧ ಮೂಲಸೌಲಭ್ಯ ಒದಗಿಸಲು ಮನವಿ ಮಾಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಶಾಸಕರು ಗೋದಾಮು ದುರಸ್ತಿ, ನೀರು, ಶೌಚಾಲಯ, ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗುವುದು. ವ್ಯಾಪಾರಸ್ಥರ ಸುರಕ್ಷತೆಗೆ ಕಾವಲುಗಾರರ ನೇಮಕ ಮಾಡಲಾಗುವುದು. ಎಪಿಎಂಸಿ, ಪಾಲಿಕೆ ಅನುಮತಿ ಪಡೆದ ವ್ಯಾಪಾರಿಗಳಿಗೆ ಪ್ರಥಮ ಪ್ರಾಶಸ್ತ್ಯ, ಹಾಗೂ ಉಳಿದ ಎರಡು ಹಂತದಲ್ಲಿ ಕಳೆದ ಹಲವಾರು ವರ್ಷಗಳಿಂದ ವ್ಯಾಪಾರ ಮಾಡುವವರಿಗೆ ವ್ಯವಸ್ಥೆ ಸೇರಿದಂತೆ ಒಟ್ಟು ಮೂರು ಹಂತದಲ್ಲಿ ಮಾಡಲಾಗುವುದು ಎಂದರು.
ವ್ಯಾಪಾರಿಗಳಿಗೆ ಬೈಕಂಪಾಡಿಯಲ್ಲಿ ಈಗಿನ ಮೂರು ತಿಂಗಳ ಬಾಡಿಗೆ, ಶುಲ್ಕ ವಿಧಿಸದೆ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ವ್ಯಾಪಾರಸ್ಥರ ಅನುಕೂಲ, ದೊಡ್ಡ ವ್ಯಾಪಾರಿಗಳಿಗೆ ದೊಡ್ಡ ಗೋದಾಮು ನೀಡಿ ಸಹಕರಿಸಲಾಗುವುದು. ಉಳಿದಂತೆ ನಗರದ ವಿವಿಧೆಡೆ ನಡೆಯುವ ಅನಧಿಕೃತ ವ್ಯವಹಾರವನ್ನು ನಿಲ್ಲಿಸಲಾಗುವುದು. ಯಾವುದೇ ರಖಂ ವ್ಯಾಪಾರ ಎಪಿಎಂಸಿಯಲ್ಲಿ ಮಾತ್ರ ಅವಕಾಶ ಎಂದು ಸ್ಪಷ್ಟವಾಗಿ ನುಡಿದರು.
ಕೊರೊನಾ ಹಾವಳಿ ತಡೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ತರಕಾರಿ, ಹಣ್ಣು ಹಂಪಲು ಅಗತ್ಯ ವಸ್ತುಗಳೆಂದು ಪರಿಗಣಿಸಿ ಹೆಚ್ಚಿನ ರಿಯಾಯಿತಿ ನೀಡಿದ್ದೇವೆ.ವ್ಯಾಪಾರ ಸಮಯವನ್ನು ಚರ್ಚಿಸಿ ವಿಸ್ತರಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.