ಮಂಗಳೂರು, ಏ 08 (Daijiworld News/MSP): ಕೊರೊನಾ ನಿಯಂತ್ರಣ ಕಾರಣಕ್ಕಾಗಿ ಕರ್ನಾಟಕ ಹಾಗೂ ಕೇರಳದ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಕೇಂದ್ರದ ಮದ್ಯಪ್ರವೇಶದ ಬಳಿಕ ಷರತ್ತುಬದ್ದವಾಗಿ ಕೊರೊನಾ ಪೀಡಿತರಲ್ಲದ ರೋಗಿಗಳನ್ನು ಹೊತ್ತ ಅಂಬ್ಯುಲೆನ್ಸ್ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಗಡಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದ.ಕ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಸಾಂದರ್ಭಿಕ ಚಿತ್ರ
ಕೇರಳದ ಯಾವುದೇ ವಾಹನ ಪ್ರವೇಶಿಸದಂತೆ, ಕರ್ನಾಟಕದ ಗಡಿಗಳಲ್ಲಿ ಪೊಲೀಸ್ ಪಹರೆ ಹಾಕಲಾಗಿದೆ. ಈ ನಡುವೆ ಕೊರೊನಾ ಸೋಂಕು ಪೀಡಿತದ ಕೇರಳದ ಜಿಲ್ಲೆಗಳಿಂದ ಸಮುದ್ರದಲ್ಲಿ ದೋಣಿಗಳ ಮೂಲಕ ಮಂಗಳೂರು ಸೇರಿದಂತೆ ಕರ್ನಾಟಕಕ್ಕೆ ಜನರು ಬರುತ್ತಿದ್ದಾರೆ ಎಂಬ ವದಂತಿ ಕೇಳಿ ಬಂದಿದೆ.
ಈ ಹಿನ್ನಲೆಯಲ್ಲಿ ಕರಾವಳಿ ಕಾವಲು ಪೊಲೀಸ್ ಘಟಕದ ಅಧೀಕ್ಷಕ ಚೇತನ್. ಆರ್ ಮತ್ತು ಅಧಿಕಾರಿಗಳು ಕೇರಳ- ಕರ್ನಾಟಕದ ಗಡಿ ಭಾಗದ ಲ್ಯಾಂಡಿಂಗ್ ಪಾಯಿಂಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಂದೊಮ್ಮೆ ಕೇರಳಿಗರು ಕದ್ದುಮುಚ್ಚಿ ಸಮುದ್ರ ಮೂಲಕ ಕರಾವಳಿಯ ಜಿಲ್ಲೆಗಳಿಗೆ ಪ್ರವೇಶಿದ್ರೆ ಇಲ್ಲೂ ಸೋಂಕು ಹರಡುವ ಸಾಧ್ಯತೆ ಇದ್ದು ಈ ಹಿನ್ನಲೆಯಲ್ಲಿ ಕರಾವಳಿ ಕಾವಲು ಪೊಲೀಸ್ ಘಟಕದ ಇಂಟರ್ ಸೆಪ್ಟರ್ ಬೋಟುಗಳಿಂದ ಸಮುದ್ರ ಗಸ್ತು ನಿರ್ವಹಿಸುವಂತೆ ಸೂಚಿಸಲಾಗಿದೆ.