ಮಂಗಳೂರು, ಎ.08 (Daijiworld News/MB) : ಬೈಕಂಪಾಡಿ ಕೃಷಿ ಉತ್ಪನ್ನ ಮಾರುಟ್ಟೆ ಪ್ರಾಂಗಣದಲ್ಲಿ ವ್ಯಾಪಾರ ವ್ಯವಹಾರ ನಡೆಸಲು ತರಕಾರಿ, ಹಣ್ಣು ಹಂಪಲು ರಖಂ ವ್ಯಾಪಾರಸ್ಥರ ಸಂಘ ಒಪ್ಪಿದ್ದು ಬುಧವಾರ ಬೈಂಕಪಾಡಿಗೆ ಸ್ಥಳಾಂತರವಾಗಿದೆ.
ಕೊರೊನಾ ನಿಯಂತ್ರಣಕ್ಕೆ ಜನರು ಗುಂಪು ಸೇರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ತರಕಾರಿ, ಹಣ್ಣು ಹಂಪಲು ಸಗಟು ವ್ಯಾಪಾರವನ್ನು ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು.
ಆದರೆ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಸ್ಥರು ಬೈಕಂಪಾಡಿ ದೂರವಾಗಿದ್ದು ಅಲ್ಲಿಗೆ ಯಾವ ರಿಟೇಲ್ ವ್ಯಾಪಾರಸ್ಥರು ಬರಲಾರರು ಎಂಬ ಕಾರಣದಿಂದಾಗಿ ಸ್ಥಳಾಂತರಕ್ಕೆ ನಿರಾಕರಿಸಿದ್ದರು. ಹಾಗೆಯೇ ತಮ್ಮ ಲಾಕ್ಡೌನ್ ಮುಗಿಯುವವರೆಗೆ ತಮ್ಮ ವ್ಯಾಪಾರವನ್ನೇ ನಿಲ್ಲಿಸುತ್ತೇವೆ. ಈ ಬಗ್ಗೆ ಸಭೆ ನಡೆಸಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದರು.
ಶಾಸಕರು ಸಹಿತ ಜಿಲ್ಲಾಡಳಿತ ಮನವೊಲಿಸಲು ಯತ್ನ ಮಾಡಿದ್ದು ವ್ಯಾಪಾರಸ್ಥರು ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸದೆ ಬದಲಾಗಿ ನಮಗೆ ನಗರದ ವಿಶಾಲವಾದ ಪ್ರಮುಖ ಮೈದಾನಗಳಲ್ಲಿ ವ್ಯಾಪಾರಕ್ಕೆ ವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು.
ಮಂಗಳವಾರ ಎಪಿಎಂಸಿ ಕಚೇರಿಯಲ್ಲಿ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವ್ಯಾಪಾರಿಗಳು ಭಾಗವಹಿಸಿ ವಿವಿಧ ಮೂಲ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದು ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದ್ದಾರೆ.
ಶಾಸಕರು ವ್ಯಾಪಾರಸ್ಥರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದು ವ್ಯಾಪಾರಿಗಳಿಗೆ ಬೈಕಂಪಾಡಿಯಲ್ಲಿ ಮೂರು ತಿಂಗಳ ಬಾಡಿಗೆ, ಶುಲ್ಕ ವಿಧಿಸದೆ ವ್ಯಾಪಾರಕ್ಕೆ ಅನುಮತಿ ನೀಡಿದ್ದಾರೆ.