ಕಡಬ, ಏ 08 (Daijiworld News/MSP): ಮಾರಕ ಕೊರೊನಾ ಸೋಂಕು ಹರಡದಂತೆ ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು ಪೊಲೀಸರು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೂ ಇದಕ್ಕೆ ಕ್ಯಾರೇ ಎನ್ನದೇ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ಕಡಬ ತಾಲೂಕಿನ ರಾಮಕುಂಜದಲ್ಲಿ ಏ.7ರಂದುರಾತ್ರಿ ನಡೆದಿದೆ.
ರಾಮಕುಂಜ ಗ್ರಾಮ ಪಂಚಾಯತ್ ಕಚೇರಿ, ರಾಮಕುಂಜೇಶ್ವರ ಪ.ಪೂ.ಕಾಲೇಜು ಹಾಗೂ ರಾಮಕುಂಜ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದ ಎರಡು ಅಂಗಡಿಗಳಿಗೆ ಕಳೆದ ರಾತ್ರಿ ನುಗ್ಗಿರುವ ಕಳ್ಳರು ಹಣ ದೋಚಿರುವುದಾಗಿ ವರದಿಯಾಗಿದೆ. ರಾಮಕುಂಜ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಇಂಟರ್ನೆಟ್ನ ಮೋಡೆಮ್ ದೋಚಿದ್ದು ದಾಖಲೆಗಳನ್ನು ಎಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಡ್ರವರ್ ತೆರೆದು ಹಣಕ್ಕಾಗಿ ಹುಡುಕಾಟ ನಡೆದಿರುವುದು ಕಂಡುಬಂದಿದೆ. ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿರುವ ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿನ ಎಸ್ಬಿಐನ ಗ್ರಾಹಕ ಸೇವಾ ಕೇಂದ್ರಕ್ಕೂ ನುಗ್ಗಿದ್ದು ಇಲ್ಲಿಂದ ನಗದು ದೋಚಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೇ ಕಟ್ಟಡದಲ್ಲಿರುವ ಮೊಬೈಲ್ ಅಂಗಡಿಗೂ ನುಗ್ಗಿ ಡಿವಿಆರ್ ಕಳವುಗೈದಿದ್ದು ಡ್ರವರ್ನ ಲಾಕ್ ತೆಗೆದು ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಮಾತ್ರವಲ್ಲದೆ ರಾಮಕುಂಜ ಪ.ಪೂ.ಕಾಲೇಜಿನ ಕಚೇರಿಗೂ ನುಗ್ಗಿದ್ದು ಇಲ್ಲಿಂದ ಹಣ ದೋಚಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ದಿನಕರ ಶೆಟ್ಟಿ, ಕಡಬ ಠಾಣಾ ಎಸ್ಐ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ.