ಮಂಗಳೂರು, ಏ 08 (DaijiworldNews/SM): ದೇಶದೆಲ್ಲೆಡೆ ಕೊರೊನಾ ಎಫೆಕ್ಟ್ ತಟ್ಟಿದ್ದು, ದೇಶದೆಲ್ಲೆಡೆ ಲಾಕ್ ಡೌನ್ ಆದೇಶ ಜಾರಿಗೊಂಡಿದೆ. ಈ ನಡುವೆ ಅಗತ್ಯ ವಸ್ತುಗಳನ್ನು ಪಡೆಯಲು ಗ್ರಾಹಕರು ಪರದಾಡುತ್ತಿದ್ದಾರೆ. ಮತ್ತೆ ಕೆಲವು ಕಡೆಗಳಲ್ಲಿ ಗ್ರಾಹಕರನ್ನು ಸುಳಿಗೆ ಮಾಡುವ ಕಾರ್ಯಗಳು ಕೂಡ ನಡೆಯುತ್ತಿವೆ. ಇಂತಹ ಘಟನೆಗಳು ಮತ್ತೆ ಮರುಕಳಿಸಿದ್ದಲ್ಲಿ ಅಂತಹ ವ್ಯಾಪಾರಿಗಳ ಲೈಸನ್ಸ್ ರದ್ದುಗೊಳಿಸುವುದಾಗಿ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ದೈಜಿವರ್ಲ್ಡ್ ವಾಹಿನಿಯ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಹಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು. ನೇರ ಪ್ರಸಾರ ಕಾರ್ಯಕ್ರಮಕ್ಕೆ ಕರೆ ಮಾಡಿ ಅಳಲು ತೋಡಿಕೊಂಡ ಸಾರ್ವಜನಿಕರೊಬ್ಬರು, ಕೆಲವೊಬ್ಬರು ವ್ಯಾಪಾರಿಗಳು ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಯತ್ನ ನಡೆಸುತ್ತಿದ್ದಾರೆ. ಅವರಿಂದಾಗಿ ಮೊದಲೇ ಕಷ್ಟದಲ್ಲಿದ್ದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತು ಎಲ್ಲೆಡೆ ಜನರು ಸಂಕಷ್ಟದಲ್ಲಿದ್ದಾರೆ. ಜನತೆ ತೊಂದರೆಯನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಯಾರೂ ಕೂಡ ಜನಸಾಮಾನ್ಯರನ್ನು ದರೋಡೆ ಮಾಡುವ ಯತ್ನ ಮಾಡಬಾರದು. ಒಂದೊಮ್ಮೆ ಅಂತಹ ಘಟನೆಗಳು ನಡೆದರೆ ಅಥವಾ ನಮಗೆ ಆ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ಎಚ್ಚರಿಕೆ ನೀಡಿದ್ದಾರೆ.