ಉಳ್ಳಾಲ, ಏ 08 (DaijiworldNews/SM): ಕೊರೊನಾ ಲಾಕ್ ಡೌನ್ ನಿಂದ ದೇಶದೆಲ್ಲೆಡೆ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಗರ್ಭಿಣಿಯೋರ್ವರು ಕೇರಳದ ಕಣ್ಣೂರಿನಿಂದ ಮಂಗಳೂರಿನತ್ತ ಬರೋಬ್ಬರಿ 142 ಕಿ.ಮೀ. ಕಾಲ್ನಡಿಗೆ ಮೂಲಕ ನಡೆದುಕೊಂಡು ಬಂದಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಬಿಜಾಪುರ ಮೂಲದ ಗರ್ಭಿಣಿ ಸೇರಿದಂತೆ ಎಂಟು ಮಂದಿ ಕಾರ್ಮಿಕರು ಕೇರಳದ ಕಣ್ಣೂರಿನಿಂದ 142 ಕಿ.ಮೀಟರ್ ನಡೆದುಕೊಂಡೇ ಬಂದಿದ್ದು, ಮನ ಮಿಡಿಯುವ ಘಟನೆಯಾಗಿದೆ. ಇನ್ನು ವಿಪರ್ಯಾಸವೆಂದರೆ, ತುಂಬು ಗರ್ಭಿಣಿಯೊಬ್ಬರು ನಡೆದುಕೊಂಡೇ ಬರುತ್ತಿದ್ದರೂ ಯಾವೊಬ್ಬರೂ ಆಕೆಗೆ ನೆರವು ನೀಡಿಲ್ಲ. ಇಲಾಖೆಯಾಗಲಿ, ಸೇವಾ ಸಂಘಟನೆಗಳಾಗಲಿ ವಾಹನದ ವ್ಯವಸ್ಥೆ ಮಾಡಿಲ್ಲ. ಯಾರ ಮನವೂ ಕೂಡ ಗರ್ಭಿಣಿ ನೋವಿಗೆ ಮಿಡಿಯಲೇ ಇಲ್ಲ. ರಾತ್ರಿ ಹಗಲು ನಡೆದುಕೊಂಡು ಬರುತ್ತಿರಲು ಹಲವಾರು ಮಂದಿ ಇವರನ್ನು ಗಮನಿಸಿದ್ದಾರೆ. ಕೆಲವರು ಹೊಟ್ಟೆಗೆ ಊಟ ನೀಡಿದ್ದಾರೆ, ಆದರೆ, ಕೆಲವೆಡೆಗಳಲ್ಲಿ ಅದೂ ಸಿಗದೆ ಹಸಿವಿನಿಂದಲೇ ಪಾದಯಾತ್ರೆ ನಡೆಸಿದ್ದಾರೆ. ಸುಮಾರು 142 ಕಿ.ಮೀ. ಕಾಲ್ನಡಿಗೆಯ ಮೂಲಕವೇ ಕ್ರಮಿಸಿ ಇದೀಗ ಕರ್ನಾಟಕ ತಲುಪಿದ್ದಾರೆ.
ಗರ್ಭಿಣಿ ಸೇರಿದಂತೆ ಕಾರ್ಮಿಕರ ತಂಡ ಕೇರಳದಿಂದ ಕರ್ನಾಟಕಕ್ಕೆ ಬಂದಿದೆ. ಆದರೆ, ತೊಕ್ಕೊಟ್ಟು ಟೋಲ್ ಗೇಟ್ ಬಳಿ ಪೊಲೀಸರು, ಚೆಕ್ ಪೋಸ್ಟ್, ವೈದ್ಯರ ತಂಡಗಳಿದ್ದರೂ, 8 ಮಂದಿ ಕಾರ್ಮಿಕರ ತಂಡವನ್ನು ತಪಾಸಣೆ ನಡೆಸದೆ ಕರ್ನಾಟಕಕ್ಕೆ ಬರಲು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಣ್ಣೂರು, ಕಾಸರಗೋಡಿನಲ್ಲಿ ಕೊರೊನಾ ಸೋಂಕು ತೀವ್ರವಾಗಿದ್ದರೂ ಕೂಡ ಕರ್ನಾಟಕಕ್ಕೆ ಈ ತಂಡ ಪ್ರವೇಶ ಮಾಡುವ ಸಂದರ್ಭ ಪರೀಕ್ಷೆಗೆ ಒಳಪಡಿಸದಿರುವುದು ಆತಂಕದ ವಿಚಾರವಾಗಿದೆ.
ಕಟ್ಟಡ ಕೆಲಸದ ನಿಮಿತ್ತ ಕೇರಳದ ಕಣ್ಣೂರಿನಲ್ಲಿ ಬಿಜಾಪುರದ ಎಂಟು ಮಂದಿ ಕಾರ್ಮಿಕರು ಕೆಲಸಕ್ಕಿದ್ದರು. ಕೋವಿಡ್ 19ನಿಂದಾಗಿ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಗುತ್ತಿಗೆದಾರ ಕಾರ್ಮಿಕರನ್ನು ಊರಿಗೆ ಹೋಗುವಂತೆ ತಿಳಿಸಿದ ಹಿನ್ನೆಲೆಯಲ್ಲಿ, ಎಂಟೂ ಮಂದಿಯೂ ನಿರ್ಗತಿಕರಾಗಿ ಕಳೆದ ನಾಲ್ಕು ದಿನಗಳಿಂದ ನಡೆದುಕೊಂಡು ಊರು ಸೇರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಇನ್ನೊಂದಡೆ ಕಾರ್ಮಿಕರ ಸುರಕ್ಷತೆಯನ್ನೂ ಗಮನಿಸದೆ ಅವರನ್ನು ರಸ್ತೆಯುದ್ದಕ್ಕೂ ಬಿಟ್ಟಿರುವ ಗುತ್ತಿಗೆದಾರನ ವಿರುದ್ದ ಕ್ರಮ ಆಗಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಈ ಕೂಡಲೇ ಜಿಲ್ಲಾಡಳಿತ ಎಂಟು ಕಾರ್ಮಿಕರ ಆರೋಗ್ಯ ಪರೀಕ್ಷೆಗೆ ಮುಂದಾಗಬೇಕಿದೆ. ಕೇರಳದಲ್ಲಿ ಎದುರಿಸಿದ ಸಂಕಷ್ಟ ಇಲ್ಲಿಯೂ ಕೂಡ ಮುಂದುವರೆಯದೆ ಇಲ್ಲಿನ ಸ್ಥಳೀಯಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ.