ಸುಳ್ಯ, ಎ.09 (Daijiworld News/MB) : ರಾಜ್ಯ ಸರ್ಕಾರದಿಂದ ಈಗಾಗಲೇ ಪಡಿತರ ವಿತರಣೆ ಸಮರ್ಪಕವಾಗಿ ನಡೆಯುತ್ತಿದೆ. ಈ ವಾರದಲ್ಲಿ ಕೇಂದ್ರ ಘೋಷಿಸಿರುವ ಪಡಿತರ ಸಾಮಾಗ್ರಿ ಬರಲಿದ್ದು ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಈ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ವೈದ್ಯರು, ಪೊಲೀಸ್ ಸಿಬಂದಿ, ಇಲಾಖಾ ಅಧಿಕಾರಿಗಳು, ಆಶಾ ಕಾರ್ಯಕರ್ತರು ಹಗಳಿರುಳು ಕೊರೊನಾ ನಿಯಂತ್ರಣ ಮಾಡಲೆಂದು ದುಡಿಯುತ್ತಿದ್ದಾರೆ. ಜನರು ಕೂಡಾ ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಆರಂಭದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಯಿತು. ಇದಾದ ಬಳಿಕ ಜಿಲ್ಲಾಡಳಿತ, ಅಧಿಕಾರಿಗಳ ಕರ್ತವ್ಯ, ಜಿಲ್ಲೆಯ ಶಾಸಕರು, ಸಚಿವರು, ಅಧಿಕಾರಿಗಳು ಸೇರಿ ಅನೇಕ ಮುಂಜಾಗ್ರತಾ ಕ್ರಮ ಜಾರಿ ಮಾಡಿದ ಕಾರಣದಿಂದಾಗಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. ಇದಕ್ಕೆ ಮುಖ್ಯ ಉದಾಹರಣೆ ಪ್ರಥಮ ಹಂತದಲ್ಲಿ ದಾಖಲಾದ ರೋಗಿಗಳು ಗುಣಮುಖರಾಗಿರುವುದಾಗಿದೆ ಎಂದು ಹೇಳಿದರು.
ಸುಳ್ಯದಲ್ಲಿ ಫೀವರ್ ಕ್ಲಿನಿಕ್ ಉತ್ತಮವಾಗಿ ನಡೆಯುತ್ತಿದೆ. ಈ ತಾಲೂಕಿನಲ್ಲಿ ಒಂದು ಕೊರೊನಾ ಪ್ರಕರಣ ಕಂಡು ಬಂದ ಕಾರಣದಿಂದಾಗಿ ಅಜ್ಜಾವರ ಗ್ರಾಮವನ್ನೇ ಕ್ವಾರಂಟೈನ್ ಮಾಡಲಾಗಿದೆ ಎಂದರು.
ಹಾಗೆಯೇ ವೈದ್ಯಕೀಯ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಸಂಸದರ ನಿಧಿಯ ಅನುದಾನವನ್ನು ಎಲ್ಲ ಸಂಸದರು ಪ್ರಧಾನಮಂತ್ರಿ ನಿಧಿಗೆ ನೀಡಿದ್ದಾರೆ ಎಂದು ತಿಳಿಸಿದರು.
ವಿದ್ಯುತ್ ಬಿಲ್ ಪಾವತಿ ಮಾಡಲು 3 ತಿಂಗಳು ಸಡಿಲಿಕೆ ನೀಡಲಾಗಿದೆ. ಬಿಲ್ ಕಟ್ಟುವವರು ಕಟ್ಟಬಹುದು. ಹಾಗೆಯೇ ಕೇಂದ್ರದ ಯೋಜನೆಗಳ ಹಣ ಕೂಡ ಜನರ ಬ್ಯಾಂಕ್ ಖಾತೆಗಳಿಗೆ ಸಂದಾಯವಾಗುತ್ತಿದೆ. ಇಎಂಐ ಕಟ್ಟುವಂತೆ ನೊಟೀಸ್ ಬರುತ್ತದೆ. ಆದರೆ ಕಂತು ಕಟ್ಟಲು ಕಡ್ಡಾಯ ಮಾಡುವಂತಿಲ್ಲ ಎಂದು ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹಾಗೆಯೇ ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ಅವರ ರಕ್ಷಣೆಗಾಗಿ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.