ಬೆಳ್ತಂಗಡಿ, ಎ.09 (Daijiworld News/MB) : ಲಾಕ್ ಡೌನ್ ಕಾರಣದಿಂದ ತಾಲೂಕಿನ ರಬ್ಬರ್ ಬೆಳೆಗಾರರಿಗಗೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಸಾಧ್ಯವಾಗದೇ ಬಹಳಷ್ಟು ಉಳಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ರಬ್ಬರ್ ಬೆಳೆಗಾರರ ಹಿತವನ್ನು ಕಾಪಾಡುವ ದೃಷ್ಟಿಯಿಂದ ತಾಲೂಕಿನಲ್ಲಿ ರಬ್ಬರ್ ಖರೀದಿಸಲು ಬೆಳ್ತಂಗಡಿ ರಬ್ಬರ್ ಸೊಸೈಟಿಗೆ ಅನುಮತಿ ನೀಡಲಾಗಿದ್ದು, ಎಪ್ರಿಲ್ 9 ರಿಂದ ರಬ್ಬರ್ ಖರೀದಿಸಲಾಗುತ್ತದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರುಗಳು ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಗುರುವಾಯನಕೆರೆ ಹಾಗೂ ಉಜಿರೆ ಖರೀದಿ ಕೇಂದ್ರಗಳಲ್ಲಿ ಪ್ರತಿ ದಿನ 50 ಬೆಳೆಗಾರರಿಂದ ತಲಾ ನೂರು ಕೆಜಿ ರಬ್ಬರ್ ಖರೀದಿಸಲು ಅನುಮತಿ ನೀಡಲಾಗಿದೆ. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಮುನ್ನೆಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಬ್ಬರ್ ಸೊಸೈಟಿಯ ಸದಸ್ಯರ ಬೇಡಿಕೆಯನ್ನು ಅನುಸರಿಸಿ ಸಂಘದ ಆಡಳಿತ ಮಂಡಳಿ, ಸಣ್ಣ ಪ್ರಮಾಣದಲ್ಲಿ ಸಂಘದ ಮುಖ್ಯ ಕಛೇರಿ ಹಾಗೂ ಗುರುವಾಯನಕೆರೆ ಶಾಖೆಯಲ್ಲಿ ಷರತ್ತುಗಳನ್ವಯ ರಬ್ಬರು ಖರೀದಿಸಲಾಗುವುದು. ಒಬ್ಬ ಸದಸ್ಯರಿಂದ ಗರಿಷ್ಟ 100 ಕೆ.ಜಿ. ಮೀರದಂತೆ ಖರೀದಿಸುವುದು. ಸದಸ್ಯರು ಹಿಂದಿನ ದಿನ ಸಂಘವನ್ನು ಸಂಪರ್ಕಿಸಿ (08256-236183/236783) ಟೋಕನ್ ನಂಬ್ರ ಪಡೆದು ಮರುದಿನ ರಬ್ಬರ್ ತರುವುದು. ಪ್ರತಿ ದಿನ ಸಂಘದ ಮುಖ್ಯ ಕಛೇರಿಯಲ್ಲಿ 30 ಸದಸ್ಯರಿಂದ ಮತ್ತು ಶಾಖಾ ಕಚೇರಿಯಲ್ಲಿ 20 ಸದಸ್ಯರಿಂದ ಮಾತ್ರ ಖರೀದಿಗೆ ಅವಕಾಶ ನೀಡುವುದು ಎಂದು ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ತಿಳಿಸಿದ್ದಾರೆ.