ವಿಟ್ಲ, ಎ.09 (Daijiworld News/MB) : ಲಾಕ್ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೆಯೇ ನ್ಯಾಯ ಬೆಲೆ ಅಂಗಡಿಯಲ್ಲಿಯೇ ದಿನಸಿ ಅಂಗಡಿ ನಡೆಸುತ್ತಿದ್ದು ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಗಡಿ ಮುಚ್ಚಿಸಿದ್ದಾರೆ.
ಪೆರುವಾಯಿ ಗ್ರಾಮದ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಒಂದು ಕಡೆ ನ್ಯಾಯ ಬೆಲೆ ಅಂಗಡಿ ಇದ್ದು ಅದರ ಪಕ್ಕದ ಇನ್ನೊಂದು ಕಟ್ಟಡದಲ್ಲಿ ಪೈಪ್ ಅಂಗಡಿ ಇದೆ. ಅದೇ ಅಂಗಡಿಯಲ್ಲಿ ಸಾರ್ವಜನಿಕರಿಗೆ ಬೇಕಾದ ದಿನಸಿ ಅಂಗಡಿ ನಡೆಸಲಾಗುತ್ತಿತ್ತು. ನೂರಾರು ಗ್ರಾಮಸ್ಥರು ಇಲ್ಲಿಗೆ ಬಂದು ಖರೀದಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ದಿನಸಿ ಅಂಗಡಿಯವರು ಗ್ರಾಮ ಪಂಚಾಯಿತಿನಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಬಗ್ಗೆ ಸಂಘದ ವ್ಯವಸ್ಥಾಪಕರಲ್ಲಿ ಕೇಳಿದಾಗ ಅನುಮತಿ ಇದೆ ಎಂದು ಹೇಳಿದ್ದು, ಆದರೆ ಯಾವುದೇ ದಾಖಲೆ ತೋರಿಸಿಲ್ಲ. ಅದರ ಬದಲು ಕೃಷಿ ಮಾರುಕಟ್ಟೆಯಿಂದ ಚಿಲ್ಲರೆ ವ್ಯಾಪಾರಕ್ಕೆ ಪಡೆದ ಪತ್ರ ತೋರಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಉದ್ಧಟತನದಿಂದ ವರ್ತನೆ ಮಾಡಿದ್ದಾರೆ.
ಈ ಬಗ್ಗೆ ಪೆರುವಾಯಿ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಬಂದು ಗ್ರಾಮ ಪಂಚಾಯಿತಿನಿಂದ ಅನುಮತಿ ಪಡೆದು ವ್ಯಾಪಾರ ನಡೆಸಿ ಎಂದು ಹೇಳಿ, ಅಂಗಡಿ ಮುಚ್ಚುವಂತೆ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಪೆರುವಾಯಿ ಅಭಿವೃದ್ಧಿ ಅಧಿಕಾರಿ, ಅಂಗಡಿ ಮಾಲೀಕ ಗ್ರಾಮ ಪಂಚಾಯಿತಿನಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.