ಮಂಗಳೂರು, ಎ.10 (Daijiworld News/MB) : ಈ ಮೊದಲು ಕೊರೊನಾ ಶಂಕಿತರಿಗೆ ರೈಲು ಬೋಗಿಗಳಲ್ಲಿ ಐಸೊಲೇಶನ್ ವಾರ್ಡ್ ತೆರೆಯಲು ರೈಲ್ವೇ ಇಲಾಖೆ ನಿರ್ಧರಿಸಿದ್ದು ಇದೀಗ ರಾಜ್ಯದ ಕೆಎಸ್ಆರ್ಟಿಸಿ ಕೆಲವು ಬಸ್ಗಳಲ್ಲಿ ಕೋವಿಡ್ 19 ಮೊಬೈಲ್ ಟೆಸ್ಟಿಂಗ್ ಲ್ಯಾಬ್ ಆರಂಭಿಸುವ ಕುರಿತಾಗಿ ರಾಜ್ಯ ಸರಕಾರದ ಮುಂದೆ ಪ್ರಸ್ತಾಪ ಮಾಡಿದೆ.
ಕೊರೊನಾ ಶಂಕಿತರನ್ನು ಪರೀಕ್ಷೆ ಮಾಡಲು ಸುಲಭವಾಗುವ ಉದ್ದೇಶದಿಂದ ಮೊಬೈಲ್ ಟೆಸ್ಟಿಂಗ್ ಲ್ಯಾಬ್ ಆರಂಭಕ್ಕೆ ಕೆಎಸ್ಆರ್ಟಿಸಿ ಮುಂದಾಗಿದ್ದು ಬಸ್ಗಳನ್ನೇ ಕೊರೊನಾ ಶಂಕಿತರ ಪ್ರದೇಶಕ್ಕೆ ಕೊಂಡೊಯ್ದು ಸ್ಥಳದಲ್ಲೇ ತಪಾಸಣೆ ಮಾಡಬಹುದಾಗಿದೆ.
ಈ ಬಸ್ ಆಧಾರಿತ ಕೋವಿಡ್ 19 ಸೋಂಕು ತಪಾಸಣಾ ಪ್ರಯೋಗಾಲಯ ಸ್ಥಾಪನೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಒಪ್ಪಿಗೆ ಲಭಿಸಬೇಕಾಗಿದೆ.
ರಾಜ್ಯದ 30 ಜಿಲ್ಲೆಗಳ ಪೈಕಿ ಮೈಸೂರು, ಹಾಸನ, ವಿಜಯನಗರ, ಶಿವಮೊಗ್ಗ, ಗುಬ್ಬರ್ಗ, ಬೆಂಗಳೂರಿನಲ್ಲಿ 4, ಹುಬ್ಬಳ್ಳಿ, ಮಂಗಳೂರಿನಲ್ಲಿ ಮಾತ್ರ ಕೊರೊನಾ ಪರೀಕ್ಷಾ ಕೇಂದ್ರಗಳಿದ್ದು ಉಳಿದ ಜಿಲ್ಲೆಗಳ ಕೊರೊನಾ ಸೋಂಕಿತರ ದ್ರವದ ಮಾದರಿಯನ್ನು ನೆರೆಯ ಜಿಲ್ಲೆಗೆ ಕಳುಹಿಸಿ ಅಲ್ಲಿಂದ ಬರುವ ವರದಿಗಾಗಿ ಕಾಯಬೇಕಾಗಿದೆ. ಆದರೆ ಬಸ್ಗಳಲ್ಲಿ ಪರೀಕ್ಷಾ ಕೇಂದ್ರ ತೆರದ್ದಲ್ಲಿ ಈಗಿರುವ ಕೇಂದ್ರಗಳ ಮೇಲೆ ಬೀಳುತ್ತಿರುವ ಒತ್ತಡ ಕಡಿಮೆಯಾಗುವುದರೊಂದಿಗೆ ಸೋಂಕಿತ ಇದ್ದ ಪ್ರದೇಶಕ್ಕೆ ಹೋಗಿ ಪರೀಕ್ಷೆ ಮಾಡಬಹುದಾಗಿದೆ.
ಇನ್ನು ಈ ಕುರಿತಾಗಿ ಮಾತನಾಡಿದ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, "ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಹಾಟ್ಸ್ಪಾಟ್ಗಳಲ್ಲಿ ಕೆಎಸ್ಆರ್ಟಿಸಿಯ 100 ಬಸ್ಗಳಲ್ಲಿ ಮೊಬೈಲ್ ಟೆಸ್ಟಿಂಗ್ ಸೆಂಟರ್ ಲ್ಯಾಬ್ ತೆರೆಯುವ ಕುರಿತಾಗಿ ರಾಜ್ಯ ಸರಕಾರದ ಮುಂದೆ ಪ್ರಸ್ತಾಪ ಮಾಡಲಾಗಿದೆ. ಇದಕ್ಕಾಗಿ 8ರಿಂದ 9 ಲಕ್ಷ ಕಿ.ಮೀ. ಕ್ರಮಿಸಿ ಸುಸ್ಥಿತಿಯಲ್ಲಿರುವ ಬಸ್ಗಳನ್ನು ಬಳಬಹುದಾಗಿದೆ. ಐಸಿಎಂಆರ್ನಿಂದ ಒಪ್ಪಿಗೆ ಬಂದರೆ ಕೂಡಲೇ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.