ಕಡಬ, ಏ 10 (Daijiworld News/MSP):ಕಡಬ ತಾಲೂಕಿನ ಐತೂರು ಗ್ರಾಮದಲ್ಲಿ ಈಗ ಆತಂಕ ಶುರುವಾಗಿದೆ. ಇದಕ್ಕೆ ಕಾರಣ ತಮಿಳುನಾಡಿನಿಂದ ಒಂದು ಕುಟುಂಬ ಬೈಕ್ ಮೂಲಕ ಐತೂರು ಗ್ರಾಮದ ಓಟೆಕಜೆಗೆ ಬಂದಿರುವುದು.
ತಮಿಳುನಾಡಿನಿಂದ ಕಡಬ ತಾಲೂಕಿನ ಐತೂರು ಗ್ರಾಮದ ಓಟಕಜೆ ಸಿ.ಆರ್.ಸಿ ಕಾಲೋನಿಗೆ ನಾಲ್ವರು ಆಗಮಿಸಿದ್ದಾರೆ. ಇವರು ಅಲ್ಲಿಂದ ಇಲ್ಲಿಯ ವರೆಗೂ ಬೈಕ್ ನಲ್ಲಿ ಮೆಡಿಕಲ್ ಎಮರ್ಜೆನ್ಸಿ ಸ್ಟಿಕ್ಕರ್ ಹಾಕಿಕೊಂಡು ಬಂದಿರುವುದು ವಿಶೇಷ. ತಂದೆ, ತಾಯಿ ಮತ್ತು 2 ಮಕ್ಕಳು ಗುರುವಾರ ಬೈಕಿನಲ್ಲಿ ತಮಿಳುನಾಡಿನ ಕೋಯಂಮುತ್ತೂರಿನಿಂದ ಕರ್ನಾಟಕಕ್ಕೆ ಬಂದಿದ್ದಾರೆ.ಇವರು ಈ ತರಹ ಆಗಮಿಸುವಾಗ ಪೊಲೀಸರು ಎಲ್ಲೂ ತಪಾಸಣೆಗೆ ಒಳಪಡಿಸಿಲ್ಲವೇ ಎಂಬುದು ಆಶ್ಚರ್ಯಕರವಾದ ವಿಚಾರ ಆಗಿದೆ.
ನೂರಾರು ಕಿಮೀ ಮಕ್ಕಳ ಸಮೇತ ಇವರು ಮೆಡಿಕಲ್ ಎಮರ್ಜೆನ್ಸಿ ಸ್ಟಿಕ್ಕರ್ ಹಾಕಿಕೊಂಡು ಬಂದಿರುವ ಬಗ್ಗೆ ತನಿಖೆಯಾಗಬೇಕು ಎಂಬುದಾಗಿ ಸ್ಥಳೀಯ ಕಾಲೋನಿ ನಿವಾಸಿಗಳು ಆಗ್ರಹಿಸಿದ್ದಾರೆ. ಈ ಓಟೆಕಜೆ ಕಾಲೋನಿಯಲ್ಲಿ ಸುಮಾರು 40 ಕುಟುಂಬಗಳು ಇಲ್ಲಿ ವಾಸಿಸುತ್ತಾರೆ. ಕಾಲನಿಯಲ್ಲಿ ಈಗ ಭಯದ ವಾತಾವರಣ ಶುರು ಆಗಿದೆ.