ಮಂಗಳೂರು, ಎ.10 (Daijiworld News/MB) : ಕೊರೊನಾ ತಡೆಗಟ್ಟುವ ಹಿನ್ನಲೆಯಲ್ಲಿ ದೇಶದಾದ್ಯಂತ ಲಾಕ್ಡೌನ್ ಮಾಡಲಾಗಿದ್ದು ಕ್ರೈಸ್ತರ ಪವಿತ್ರ ದಿನಗಳಲ್ಲಿ ಒಂದಾದ ಗುಡ್ ಫ್ರೈ ಡೆ ಯಂದು ಪ್ರತಿ ವರ್ಷವು ಚರ್ಚ್ಗಳಲ್ಲಿ ನಡೆಸಲಾಗುವ ಸಾಮೂಹಿಕ ಪ್ರಾರ್ಥನೆಗೆ ಕೊರೊನಾ ತಡೆಯಾಗಿ ಪರಿಣಮಿಸಿತು.
ಪ್ರತಿ ವರ್ಷವು ಗುರುವಾರದಿಂದ ಹಿಡಿದು ಭಾನುವಾರದವರೆಗೆ ಚರ್ಚ್ನಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆದರೆ ಈ ಭಾರಿ ಲಾಕ್ಡೌನ್ ಜಾರಿ ಹಾಗೂ ಸಾಮಾಜಿಕ ಅಂತರ ಕಾಯ್ದೊಕೊಳ್ಳುವ ಅನಿವಾರ್ಯತೆಯಿಂದಾಗಿ ಚರ್ಚ್ಗಳಲ್ಲಿ ಸಾಮೂಹಿಕವಾಗಿ ಬಲಿಪೂಜೆ ನಡೆಯಲಿಲ್ಲ.
ಗುರುವಾರ ಸಂಜೆ 5 ಗಂಟೆಗೆ ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರೊಜಾರಿಯೋ ಕೆಥೆಡ್ರೆಲ್ನಲ್ಲಿ ಬಲಿಪೂಜೆಯನ್ನು ನಡೆಸಿದ್ದು ಅದನ್ನು ಯೂಟ್ಯೂಬ್ ಮೂಲಕ ಹಾಗೂ ಖಾಸಗಿ ಸುದ್ದಿ ವಾಹಿನಿಗಳ ಮೂಲಕ ನೇರ ಪ್ರಸಾರ ಮಾಡಲಾಗಿದ್ದು ಕ್ರೈಸ್ತರು ಮನೆಯಲ್ಲೆ ವೀಕ್ಷಿಸಿ ಪ್ರಾರ್ಥನೆ ಸಲ್ಲಿಸಿದರು.
ಉಡುಪಿ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಗುರುವಾರ ತಮ್ಮ ನಿವಾಸದ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಚರ್ಚ್ಗಳಲ್ಲಿ ಭಕ್ತರರಿಲ್ಲದೆಯೇ ಬಲಿಪೂಜೆ ನೆರೆವೇರಿಸಿದ್ದಾರೆ. ಹಾಗೆಯೇ ಎಲ್ಲಾ ಚರ್ಚ್ಗಳಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.