ಮಂಗಳೂರು, ಮಾ 2: ವ್ಯಕ್ತಿಯೋರ್ವ ಕುಡಿದು ಬಸ್ಸೇರಿ ಪ್ರಯಾಣಿಕರು ಹಾಗೂ ನಿರ್ವಾಹಕರಿಗೆ ಕಿರಿಕಿರಿ ಉಂಟುಮಾಡಿದ ಪ್ರಸಂಗವೊಂದು ಗುರುವಾರ ನಡೆದಿದೆ.62 ನೇ ರೂಟ್ ನಂಬರಿನ ಖಾಸಗಿ ಬಸ್ಸಿಗೆ ಕೊಂಚಾಡಿ ನಿಲ್ದಾಣದಲ್ಲಿ ಹತ್ತಿದ ಈತ ಕುಡಿದು ತೂರಾಡುತ್ತಿದ್ದ. ಬಳಿಕ ನಿರ್ವಾಹಕರೊಂದಿಗೆ ನಾನು ಪೊಲೀಸ್ ಎಂದು ಹೇಳಿಕೊಂಡು ಸುಖಾಸುಮ್ಮನೆ ಅವಾಜ್ ಹಾಕಲು ಪ್ರಾರಂಭಿಸಿದ. ಪಾನಮತ್ತಾಗಿ ಈತ ಕಿರಿಕ್ ಮಾಡುತ್ತಿದ್ದಾನೆಂದು ಪ್ರಯಾಣಿಕರು ಹಾಗೂ ನಿರ್ವಾಹಕರು ಸುಮ್ಮನಿದ್ದರೂ ಕೂಡಾ ಆತ ಕಿರಿಕ್ ಮಾಡುವುದನ್ನು ನಿಲ್ಲಿಸುತ್ತಿರಲಿಲ್ಲ. ಇತನ ರದ್ದಾಂತ ಜೋರಾಗುತ್ತಿದ್ದಂತೆ, ಪ್ರಯಾಣಿಕರು ಹಾಗೂ ನಿರ್ವಾಹಕರು ಬಸ್ಸಿನಿಂದ ಇಳಿಯುವಂತೆ ಮನವಿ ಮಾಡಿಕೊಂಡರೂ ಕೇಳುತ್ತಿರಲಿಲ್ಲ. ನೀವ್ಯಾರು ನಾನು ಸಮವಸ್ತ್ರ ಧರಿಲಿಲ್ಲವೆಂದು ಗೌರವ ನೀಡುತ್ತಿಲ್ಲ, ನಾಳೆ ಸಮವಸ್ತ್ರದಲ್ಲಿ ಬಂದು ನಿಮಗೆ ಕೇಸ್ ಜಡಿಯುತ್ತೇನೆ ಎಂದು ಮತ್ತೆ ಅವ್ಯಾಚ ಶಬ್ದಗಳಲ್ಲಿ ನಿಂದಿಸತೊಡಗಿದ್ದಾನೆ. ಈತನ ಅವಾಂತರ ವಿಪರೀತವಾದ ಕಾರಣ, ಪ್ರಯಾಣಿಕರು ಪೊಲೀಸ್ ಇಲಾಖೆಯ ನಮಗೆಲ್ಲ ಗೌರವಿದ್ದೂ , ಈ ರೀತಿ ಕುಡಿದು ದಯವಿಟ್ಟು ಇಲಾಖೆಯ ಮಾನ ಕುಡಿದು ಹರಾಜು ಹಾಕಬೇಡಿ ಎಂದು ವಿನಂತಿಸಿಕೊಂಡರೂ, ಈತ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ.
ಕೊನೆಗೆ ಉಪಾಯವಿಲ್ಲದೇ ಬಸ್ಸು ನಂತೂರಿನ ವೃತ್ತದ ಬಳಿ ಬಂದಾಗ ಪೊಲೀಸ್ ಎಂದು ಹೇಳಿಕೊಂಡಿದ್ದ ಈತ ಇಳಿದು ಅಲ್ಲಿ ಟ್ರಾಫಿಕ್ ನಿಭಾಯಿಸುತ್ತಿದ್ದ ಸಂಚಾರಿ ಪೊಲೀಸರಿಗೆ ದೂರು ಸಲ್ಲಿಸಿದ.ಘಟನೆಯ ಬಗ್ಗೆ ಅರಿವಿಲ್ಲದೇ ಸಂಚಾರಿ ಪೊಲೀಸರು, ಬಸ್ಸನ್ನು ತಡೆದು ನಿಲ್ಲಿಸಿದ್ದಾರೆ. ಆಗ ಪ್ರಯಾಣಿಕರೆಲ್ಲರೂ ಒಂದಾಗಿ ಟ್ರಾಫಿಕ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ . ಬಳಿಕ ಘಟನೆಯ ಬಗ್ಗೆ ಮಾಹಿತಿ ಪಡೆದ ಸಂಚಾರಿ ವಿಭಾಗದ ಪೊಲೀಸರು ಕ್ಷಮೆ ಯಾಚಿಸಿ ಬಸ್ಸಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಪ್ರಯಾಣಿಕರಿಗೆ ಈತನ ರದ್ದಾಂತದಿಂದ ಕಿರಿಕಿರಿ ಅನುಭವಿಸುವ ಜತೆ ಪುಕ್ಸಟೆ ಮನೋರಂಜನೆಯನ್ನು ಪಡೆಯುವಂತಾಯಿತು. ಆದರೆ ಈತ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಅಥವಾ ತನ್ನನ್ನು ತಾನು ಕುಡಿದ ಅಮಲಿನಲ್ಲಿ ಪೊಲೀಸ್ ಎಂದು ಹೇಳಿಕೊಂಡಿದ್ದಾನೇಯೋ ಎನ್ನುವುದು ಸ್ಪಷ್ಟವಾಗಿಲ್ಲ.