ಮಂಗಳೂರು, ಏ 11 (Daijiworld News/MSP): ಕೇರಳದ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ಜಿಲ್ಲೆಯ ಹೆಚ್ಚಿನ ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ನೀಡಿದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟಿಸುವುದಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಎಚ್ಚರಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಿಥುನ್ ರೈ, "ಕೇರಳ ರಾಜ್ಯ ಮೂಲದ ಕೊರೊನಾ ವೈರಸ್ ಅಲ್ಲದ ರೋಗಿಗಳ ಚಿಕಿತ್ಸೆಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಈಗಾಗಲೇ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಅನುಮತಿ ನೀಡಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಚಿಕಿತ್ಸೆ ಸಿಗದೆ ಹೃದಯ ಸಂಬಂಧಿ ಕಾಯಿಲೆ, ಅಪಘಾತ ಹಾಗೂ ಇನ್ನಿತರ ತುರ್ತು ಚಿಕಿತ್ಸೆಗಾಗಿ ದೇರಳಕಟ್ಟೆಯಲ್ಲಿರುವ ಕೆ.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅವಕಾಶ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ತಾಲೂಕುಗಳಿದ್ದು ಕಡಬ, ಬೆಳ್ತಂಗಡಿ ಸುಳ್ಯ, ಪುತ್ತೂರು, ಬಂಟ್ವಾಳ, ಮೂಡುಬಿದ್ರೆ ಮತ್ತು ಮಂಗಳೂರು ತಾಲೂಕಿನಲ್ಲಿರುವ ಜನರು ಆರೋಗ್ಯ ಸಮಸ್ಯೆಗೀಡಾಗದ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಅವಲಂಬಿಸಿರುತ್ತಾರೆ".
"ಕೇರಳದ ರೋಗಿಗಳ ಚಿಕಿತ್ಸೆಗಾಗಿ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು, ಜಿಲ್ಲಾಡಳಿತವು ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ಅನುಮತಿಸಿದರೆ, ನಮ್ಮ ಜಿಲ್ಲೆಯ ಜನರು ತೊಂದರೆ ಅನುಭವಿಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಜನರು ಈಗಾಗಲೇ ಕಾಸರಗೋಡಿನ ಜನರ ಬಗ್ಗೆ ತಮ್ಮ ಕಾಳಜಿಯನ್ನು ತೋರಿಸಿ ಅವರ ಚಿಕಿತ್ಸೆಗಾಗಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯನ್ನು ನೀಡಿದ್ದಾರೆ. ಕಾಸರಗೋಡಿನ ಕೊರೊನಾ ವೈರಸ್ ಸೋಂಕಿತ ರೋಗಿಗಳು ಸಹ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇದರಿಂದ ನಮ್ಮ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ದಾದಿಯರ ಆರೋಗ್ಯದ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ".
ಮಂಗಳೂರು ನಗರಕ್ಕೆ ಕೊಲ್ಲಿ ರಾಷ್ಟ್ರಗಳಿಂದ ಶೇಕಡಾ 65ರಷ್ಟು ಕೇರಳ ಮೂಲದವರು, ಶೇಕಡ 35 ರಷ್ಟು ನಮ್ಮ ಜಿಲ್ಲೆಯವರೇ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಕೋನವನ್ನು ಇಟ್ಟುಕೊಂಡು ಆಶಾ ಕಾರ್ಯಕರ್ತರ ಸಹಾಯದಿಂದ ಕ್ವಾರೈಂಟನ್ ನ್ನು ಶಿಸ್ತುಬದ್ಧವಾಗಿ ಪಾಲಿಸಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ನಮ್ಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಕೇರಳ ಮೂಲದ ಯಾತ್ರಿಗಳಿಗೆ ಕ್ವಾರೈಂಟೈನ್ ವಿಧಿಸಿದ್ದರೂ ಈ ಯಾತ್ರಿಗಳು ಸರಿಯಾದ ರೀತಿಯಲ್ಲಿ ಹೋಂ ಕ್ವಾರಂಟೈನ್ ನ್ನು ಪಾಲಿಸದ ಕಾರಣ ಕಾಸರಗೋಡು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯಕ್ಕಿಂತ ಜಾಸ್ತಿ ಜನರು ಕೋವಿಡ್ -೧೯ ತುತ್ತಾಗಿದ್ದಾರೆ.
ನಮ್ಮ ಜಿಲ್ಲೆಯ ನೆರೆಯ ಜಿಲ್ಲೆಗಳಾದ ಉಡುಪಿ, ಕೊಡಗು ,ಚಿಕ್ಕಮಂಗಳೂರು ಜನರು ಕೂಡ ಆರೋಗ್ಯದ ಸಮಸ್ಯೆ ಬಂದಾಗ ಆರೋಗ್ಯ ತಪಾಸಣೆಗಾಗಿ ಮಂಗಳೂರು ಆಸ್ಪತ್ರೆಗಳನ್ನು ಅವಲಂಬಿಸಿರುತ್ತಾರೆ. ಆದುದರಿಂದ ಜಿಲ್ಲಾಡಳಿತ ಹಾಗೂ ಸರ್ಕಾರದ ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿಯದೆ ನಮ್ಮ ಜಿಲ್ಲೆಯ ಆರೋಗ್ಯದ ದೃಷ್ಟಿಕೋನವನ್ನು ಇಟ್ಟುಕೊಂಡು ಕೆಲಸ ಮಾಡಬೇಕಾಗಿದೆ.
ಒಂದು ವೇಳೆ ಮಂಗಳೂರಿನಲ್ಲಿರುವ ಇನ್ನಿತರ ಖಾಸಗಿ ಆಸ್ಪತ್ರೆಗಳನ್ನು ಕೂಡ ಕಾಸರಗೋಡಿನ ಜನರ ಚಿಕಿತ್ಸೆಗಾಗಿ ಅವಕಾಶ ನೀಡಿದಲ್ಲಿ ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ಪತ್ರಿಕಾಪ್ರಕಟನೆಯಲ್ಲಿ ಮಿಥುನ್ ರೈ ಎಚ್ಚರಿಸಿದ್ದಾರೆ.