ಉಡುಪಿ,ಏ 11 (Daijiworld News/MSP): ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾದ ಪ್ರಥಮ ಪ್ರಕರಣದ ಸೋಂಕಿತ ಮಣಿಪಾಲದ 34ರ ಹರೆಯದ ಯುವಕ ಗುಣಮುಖನಾಗಿದ್ದು, ಭಾನುವಾರದಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಸೋಮ್ಕು ಪತ್ತೆಯಾದ ಯುವಕ ಗಂಟಲಿನ ಸ್ರಾವವನ್ನು ಎರಡು ಬಾರಿ ಕಳುಹಿಸಲಾಗಿದ್ದು ವರದಿಯಲ್ಲಿ ನೆಗೆಟಿವ್ ಬಂದಿದೆ. ಯುವಕ ಸೋಂಕಿನಿಂದ ಚೇತರಿಸಿಕೊಂಡಿದ್ದು ಹೀಗಾಗಿ ಆತನನ್ನು ನಾಳೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಏ.8ರಂದು ಕಳುಹಿಸಿದ ಈತನ ಎರಡನೇ ಸ್ಯಾಂಪಲ್ನ ವರದಿ ಶನಿವಾರ ವೈದ್ಯರ ಕೈ ಸೇರಿದ್ದು, ಅದು ನೆಗೆಟಿವ್ ಆಗಿದೆ. ಈ ಮೂಲಕ ಕಳೆದ ಸೋಮವಾರ ಹಾಗೂ ಬುಧವಾರ ತೆಗೆದುಕೊಂಡ ಆತನ ಎರಡೂ ಮಾದರಿಗಳು ಸೋಂಕಿಗೆ ನೆಗೆಟಿವ್ ಆಗಿರುವುದರಿಂದ ಇದೀಗ ಆತ ಸೋಂಕಿನಿಂದ ಸಂಪೂರ್ಣ ಚೇತರಿಸಿ ಕೊಂಡಿರುವುದು ಖಚಿತವಾಗಿದೆ. ಹೀಗಾಗಿ ಭಾನುವಾರ ಆತನನ್ನು ಮನೆಗೆ ಕಳುಹಿಸಲಾಗುವುದು ಎಂದವರು ಹೇಳಿದರು.