ಬಂಟ್ವಾಳ, ಎ.11 (DaijiworldNews/PY) : ಕೊರೊನಾ ಪಾಸಿಟಿವ್ ಆಗಿದ್ದ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗುವು ಸಂಪೂರ್ಣ ಗುಣಮುಖವಾಗಿ ಶನಿವಾರ ಮನೆಗೆ ವಾಪಾಸ್ಸಾಗಿದೆ. ಅಲ್ಲದೇ, ಮಗುವಿನ ತಾಯಿ ಹಾಗೂ ಅಜ್ಜಿಯ ಪರೀಕ್ಷಾ ವರದಿಗಳು ನೆಗೆಟಿವ್ ಆಗಿದ್ದು, ಇವರೂ ಕೂಡಾ ಡಿಸ್ಚಾಜ್೯ ಆಗಿದ್ದಾರೆ. ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಾ.23ರಂದು ಮಗುವನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಮಗುವಿನಲ್ಲಿ ಶಂಕಿತ ಕೊರೊನಾ ಸೋಂಕು ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಮಗುವಿನ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಮಾ.26ರಂದು ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು.
10 ತಿಂಗಳ ಮಗುವಿನ ಕೊರೊನಾ ಪ್ರಕರಣವು ರಾಜ್ಯದಲ್ಲೇ ವಿಶಿಷ್ಟ ಪ್ರಕರಣವಾಗಿತ್ತು. ಕೇವಲ ಎದೆ ಹಾಲು ಕುಡಿಯುವ ಪುಟ್ಟ ಕಂದನಿಗೆ ಕೊರೊನಾ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು. ಪುಟ್ಟ ಮಗುವಿನ ಐಸೋಲೇಶನ್ ನೊಂದಿಗೆ, ಚಿಕಿತ್ಸೆ ನೀಡುವುದು ಬಹಳ ಸೂಕ್ಷ್ಮವಾಗಿತ್ತು. ವೈದ್ಯರು ಈ ಸವಾಲನ್ನು ಬಹಳ ನಾಜೂಕಾಗಿ ನಿರ್ವಹಿಸಿದ್ದು, ವೆನ್ ಲಾಕ್ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡಿ, ಮಗುವನ್ನು ಗುಣಮುಖಗೊಳಿಸಿದ್ದಾರೆ. ಇದು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೂ ಖ್ಯಾತಿ ತಂದಿದೆ.
ಅದೇ ರೀತಿ, ಮಗುವಿನ ಗ್ರಾಮದಲ್ಲಿ ಯಾರಿಗೂ ಕೊರೊನಾ ಹರಡದಿರುವುದು ಸಮಾಧಾನಕರ ವಿಷಯವಾಗಿದೆ. ಕೊರೊನಾ ದೃಢಪಟ್ಟ ನಂತರ ಇಡೀ ಸಜೀಪನಡು ಗ್ರಾಮವನ್ನು ಸಂಪೂರ್ಣ ಸೀಲ್ ಮಾಡಲಾಗಿತ್ತು. ಗ್ರಾಮಸ್ಥರು ಬಹಳ ಉತ್ತಮ ಸಹಕಾರ ನೀಡಿದ್ದಾರೆ. ಈ ಅವಧಿಯಲ್ಲಿ ಜಿಲ್ಲಾಡಳಿತ ಗ್ರಾಮಸ್ಥರಿಗೆ ಎಲ್ಲಾ ಅಗತ್ಯ ಸಾಮಾಗ್ರಿಗಳು, ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಿದೆ.