ಮಂಗಳೂರು, ಮಾ 3: ಗಾಂಧೀಜಿ ರಾಮರಾಜ್ಯದ ಕನಸು ಕಂಡಿದ್ದು, ಈ ಕನಸು ಬೆಳ್ಮ ಗ್ರಾಮದಲ್ಲಿ ನಿಜವಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.
ದೇರಳಕಟ್ಟೆಯಲ್ಲಿ ಬೆಳ್ಮ ಗ್ರಾಮ ಪಂಚಾಯಿತಿ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಳ್ಮ ಗ್ರಾಮ ಎಲ್ಲ ಬಗೆಯಲ್ಲೂ ಏಕತೆಯಲ್ಲಿ ಮುನ್ನಡೆದುಕೊಂಡು ಹೋಗುತ್ತಿರುವ ಗ್ರಾಮವಾಗಿದೆ. ಗಾಂಧೀಜಿ ಕಂಡ ಗ್ರಾಮದ ಅಭಿವೃದ್ಧಿ ಮತ್ತು ರಾಮ ರಾಜ್ಯ ಎಂಬ ಮಾತು ಇಲ್ಲಿ ನಿಜವಾಗುತ್ತಿದೆ ಎಂದರು.
ಪ್ರತಿಪಕ್ಷ ಕಾಂಗ್ರೆಸ್ ಮುಕ್ತ ಕರ್ನಾಟಕ ಎಂದು ಜಪಿಸುತ್ತಿದ್ದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಸಿವು ಮುಕ್ತ ಕರ್ನಾಟಕ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಅದಕ್ಕಾಗಿ ಮಂತ್ರಿಗಳ ಮಕ್ಕಳು ಪಡೆಯುವ ಸೌಲಭ್ಯ ಜನಸಾಮಾನ್ಯರಿಗೂ ಲಭಿಸಬೇಕು. ಇದಕ್ಕಾಗಿ ಸರಕಾರ ಬೇಕಾದಷ್ಟು ದುಡ್ಡು ಖರ್ಚು ಮಾಡುತ್ತಿದೆ ಎಂದರು.
ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ವಕ್ಪ್ ಜಿಲ್ಲಾಧ್ಯಕ್ಷ ಯು. ಕೆ. ಮೋನು , ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಎನ್. ಎಸ್. ಕರೀಂ, ಮತ್ತಿತರರು ಉಪಸ್ಥಿತರಿದ್ದರು.