ಮಂಗಳೂರು, ಎ.12 (Daijiworld News/MB): ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ಡೌನ್ ಮಾಡಲಾಗಿದ್ದು ರಾಜ್ಯದಲ್ಲಿ ಎಪ್ರಿಲ್ 30 ರವರೆಗೆ ಲಾಕ್ಡೌನ್ನ್ನು ಮುಂದುವರಿಕೆ ಮಾಡಲಾಗಿದೆ. ಈ ನಡುವೆ ರೂಂನಲ್ಲೇ ಒಬ್ಬನೇ ಇರಲು ಬೋರ್ ಆದ ವಿದ್ಯಾರ್ಥಿ ವಿಚಿತ್ರವಾದ ಪ್ಲ್ಯಾನ್ ಮಾಡಿ ಪೊಲೀಸ್ ಠಾಣೆ ಮೆಟ್ಟೆಲೇರಿ ಪೇಚಿಗೆ ಸಿಲುಕಿದ ಘಟನೆ ಮಂಗಳೂರಿನ ಆರ್ಯಸಮಾಜ ರಸ್ತೆಯಲ್ಲಿ ನಡೆದಿದೆ.
ಕೊರೊನಾ ಭೀತಿ ಹಿನ್ನಲೆಯಲ್ಲಿ ಇಲ್ಲಿನ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ವ್ಯಕ್ತಿಗಳನ್ನು ಹೊರತು ಪಡಿಸಿ ಉಳಿದ ಯಾವುದೇ ವ್ಯಕ್ತಿಗಳಿಗೆ ಪ್ರವೇಶಕ್ಕೆ ಅನುಮತಿ ಇರಲಿಲ್ಲ. ಆದರೆ ಈ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಓರ್ವ ವಿದ್ಯಾರ್ಥಿಗೆ ರೂಂನಲ್ಲಿ ಒಬ್ಬನೇ ಇರಲು ಬೋರ್ ಆಗಿದ್ದು ತನ್ನ ಗೆಳೆಯನನ್ನು ಸೂಟ್ಕೇಸ್ನಲ್ಲಿ ಇರಿಸಿ ಅಪಾರ್ಟ್ಮೆಂಟ್ ಒಳಗೆ ಕರೆದುಕೊಂಡು ಬರಲು ಯತ್ನಿಸಿದ್ದಾನೆ.
ತನ್ನ ಗೆಳೆಯನನ್ನು ದೊಡ್ಡ ಸೂಟ್ಕೇಸ್ನಲ್ಲಿ ಇರಿಸಿ ಅಪಾರ್ಟ್ಮೆಂಟ್ ಒಳಗೆ ಕೊಂಡೊಯ್ಯುತ್ತಿದ್ದಂತೆ ಸೂಟ್ಕೇಸ್ ಅಲುಗಾಡಿದ್ದು ಅನುಮಾನ ಬಂದು ತಪಾಸಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸೂಟ್ಕೇಸ್ ಒಳಗೆ ವ್ಯಕ್ತಿ ಇರುವುದು ಬೆಳಕಿಗೆ ಬಂದಿದ್ದು ಇಬ್ಬರನ್ನು ಕದ್ರಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಲಾಗುತ್ತಿದೆ.