ಬೆಳ್ತಂಗಡಿ, ಎ.12 (DaijiworldNews/PY) : ಅನಿವಾಸಿ ಭಾರತೀಯರಿಂದಲೇ ಪ್ರಾರಂಭಗೊಂಡು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ರಂಗಗಳಲ್ಲಿ ಉತ್ತಮ ರೀತಿಯಲ್ಲಿ ಸೇವೆ ಗೈಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾ ಸಂಸ್ಥೆ ಎ.ಎಮ್.ಇ.ಸಿ. ಯನ್ನು ಪ್ರವಾಸಿಗಳಿಗೆ ಅಗತ್ಯವಾದರೆ ಕ್ವಾರಂಟೈನ್ ಆಗಿ ನೀಡಲು ಸಿದ್ಧ ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರ್ ಹಾಗೂ ಎ.ಎಮ್.ಇ.ಸಿ ಇದರ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೀವನೋಪಾಯಕ್ಕಾಗಿ ವಿದೇಶದಲ್ಲಿರುವ ನೂರಾರು ಕನ್ನಡಿಗರು ಕೊರೊನಾ ಭೀತಿಯಿಂದ ಸಂಕಷ್ಟದಲ್ಲಿದ್ದಾರೆ. ಹಲವು ದೇಶಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅವರ ಸುರಕ್ಷತೆಯನ್ನು ಸರಕಾರವು ಖಚಿತಪಡಿಸಬೇಕೆಂದು ಸಂಸ್ಥೆಯ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ಆಗ್ರಹಿಸಿದರು.
2006 ರಲ್ಲಿ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಮೂಡಡ್ಕ ಎಂಬ ಕುಗ್ರಾಮದಲ್ಲಿ ಮರ್ಹೂಂ ಟಿ.ಎಚ್ .ಉಸ್ತಾದರು ಸ್ಥಾಪಿಸಿದ ಸಂಸ್ಥೆಯು ಇಂದು ಒಂದೇ ಸೂರಿನಡಿಯಲ್ಲಿ ಧಾರ್ಮಿಕ, ಲೌಕಿಕ ಶಿಕ್ಷಣಗಳೆರಡನ್ನೂ ನೀಡಿ ಸಮಾಜಕ್ಕೆ ಅವರನ್ನು ಉತ್ತಮ ಉತ್ಪನ್ನಗಳಾಗಿ ನೀಡುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿಕೊಂಡು ಬರುತ್ತಿದೆ.