ಮಂಗಳೂರು, ಎ.12 (DaijiworldNews/PY) : ದ.ಕ. ಜಿಲ್ಲೆಯಲ್ಲಿ ಓರ್ವ ಕೊರೊನಾ ಸೋಂಕಿತೆ ಬಿಡುಗಡೆಗೊಂಡಿದ್ದು, ಆ ಮೂಲಕ ದ.ಕ. ಜಿಲ್ಲೆಯಲ್ಲಿ 12 ಮಂದಿ ಸೋಂಕಿತರ ಪೈಕಿ ಏಳು ಜನರು ಡಿಸ್ಚಾರ್ಜ್ ಗೊಂಡಂತಾಗಿದೆ.
ಮಾರ್ಚ್ 9ರಂದು ಸೌದಿ ಅರೆಬಿಯಾದಿಂದ ಕ್ಯಾಲಿಕಟ್ಗೆ ಆಗಮಿಸಿದ್ದು, ಮಾ.19ರಂದು ಚಿಕಿತ್ಸೆಗಾಗಿ ಮಂಗಳೂರಿಗೆ ಆಗಮಿಸಿದ್ದರು. ಮಾ.24ರಂದು ಇವರಲ್ಲಿ ಕೊರೊನಾ ಸೋಂಕು ಲಕ್ಷಣಗಳು ಪರೀಕ್ಷಾ ವರದಿಯಿಂದ ದೃಢಪಟ್ಟಿತ್ತು. ಬಳಿಕ ಇವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಎ.7 ಹಾಗೂ 8ರಂದು ಪ್ರಯೋಗಾಲಯದಿಂದ ಬಂದ ಗಂಟಲಿನ ದ್ರವದ ಮಾದರಿಯಲ್ಲಿ ನೆಗೆಟಿವ್ ಬಂದಿದ್ದು, ಅದರಂತೆ ಸಂಪೂರ್ಣ ಗುಣಮುಖರಾದ ಇವರನ್ನು ಭಾನುವಾರ ಡಿಸ್ಚಾರ್ಜ್ ಮಾಡಲಾಗಿದೆ.
ದ.ಕ. ಜಿಲ್ಲೆಯಲ್ಲಿ ಇಂದು ಲಭ್ಯವಾದ ವರದಿಯ ಪ್ರಕಾರ 46 ಪರೀಕ್ಷಾ ವರದಿಗಳು ಸಿಕ್ಕಿವೆ. ಎಲ್ಲಾ 28 ಪ್ರಕರಣಗಳು ನೆಗೆಟಿವ್ ಆಗಿವೆ. ಭಾನುವಾರದವರೆಗೆ ಒಟ್ಟು 38,865 ಮಂದಿಯನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. 2103 ಮಂದಿ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. ಇನ್ನು 24 ಮಂದಿ ಇಎಸ್ ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. 3970 ಮಂದಿ ಈಗಾಗಲೇ 28 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ. ಇನ್ನು ಇಲ್ಲಿಯ ತನಕ ಸುಮಾರು 462 ಮಂದಿಯ ಸ್ಯಾಂಪಲ್ಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, 430 ಪರೀಕ್ಷಾ ವರದಿಗಳು ಬಂದಿವೆ. ಇವುಗಳಲ್ಲಿ 418 ಪ್ರಕರಣಗಳು ನೆಗೆಟಿವ್ ವರದಿಯನ್ನು ನೀಡಿದ್ದು, 12 ಪ್ರಕರಣಗಳು ಪಾಸಿಟಿವ್ ಆಗಿದೆ. 5 ಮಂದಿ ಚಿಕಿತ್ಸೆಯನ್ನು ಪಡೆಯುತ್ತಿದ್ದರೆ, 7 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.