ಮಂಗಳೂರು, ಎ.13 (Daijiworld News/MB) : ಕೊರೊನಾ ನಿಯಂತ್ರಿಸಲು ಸಲುವಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲ್ವೇ ಇಲಾಖೆ ಸಿದ್ಧಪಡಿಸಿರುವ ಕೋವಿಡ್ - 19 ಐಸೋಲೇಶನ್ ಬೋಗಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ ವೇದವ್ಯಾಸ್ ಕಾಮತ್ ಅವರು ಭಾನುವಾರ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಪಾಲ್ಘಾಟ್ ವಿಭಾಗವು ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ಹಾಗೂ ಸುರೇಶ್ ಅಂಗಡಿ ಅವರ ಪ್ರಯತ್ನಕ್ಕೆ ಪೂರಕವಾಗಿ ನಿಗದಿತ ಅವಧಿಗಿಂತ ಮೊದಲೇ 32 ಕೋಚ್ಗಳನ್ನು ಸಿದ್ದಮಾಡಿದೆ. ಈ ಪೈಕಿ 20 ನ್ನು ಮಂಗಳೂರಿಗೆ ಮೀಸಲಿಡಲಾಗಿದೆ. ಇವುಗಳಲ್ಲಿ ಒಟ್ಟು 320 ಬೆಡ್ಗಳು ಇದೆ ಎಂದು ಹೇಳಿದರು.
ಜಿಲ್ಲಾಡಳಿತವು ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಆಸ್ಪತ್ರೆಗಳಲ್ಲಿ ಪೂರಕ ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ರೈಲ್ವೇ ಐಸೋಲೇಶನ್ ಕೋಚ್ ಸಿದ್ಧ ಮಾಡಲಾಗಿದೆ ಎಂದು ತಿಳಿಸಿದರು.
ಹಾಗೆಯೇ ಇದನ್ನು ಇಲ್ಲಿ ಬಳಕೆ ಮಾಡಬಹುದು ಅಥವಾ ಹೆಚ್ಚು ಪ್ರಕರಣಗಳು ಇರುವ ಕೇರಳ, ಕಾಸರಗೋಡಿಗೆ ಕಳುಹಿಸಬಹುದು. ಒಂದು ಕೋಚ್ನಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಒಂದು ಕೋಚ್ ಪ್ಯಾರಾ ಮೆಡಿಕಲ್ಗೆ ಮೀಸಲಿಡಲಾಗಿದೆ. ರೈಲು ಸೇವೆ ಆರಂಭಗೊಂಡಾಗ ಕಂಕನಾಡಿಯ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಪ್ರತ್ಯೇಕ ಸ್ಥಳದಲ್ಲಿ ಇಡಲಾಗುವುದು ಎಂದು ಹೇಳಿದರು.
ಐಸೋಲೇಶನ್ ಬೋಗಿಯಲ್ಲಿ ಎಲೆಕ್ಟ್ರಾನಿಕ್ ಚಾರ್ಚಿಂಗ್ ವ್ಯವಸ್ಥೆ, ಬಟ್ಟೆ, ಕೋಟ್, ಔಷಧ, ಬಕೆಟ್ ಇಡಲು ಪ್ರತ್ಯೇಕ ವ್ಯವಸ್ಥೆಯಿದೆ. ಎಲ್ಲಾ ಬೋಗಿಯಲ್ಲಿ ಡಸ್ಟ್ ಬಿನ್, ವೈದ್ಯರಿಗೆ ಬೇಕಾದ ಅಗತ್ಯ ಸೌಲಭ್ಯ, ಔಷಧ ಸಿಂಪಡಿಸಲು ಸೋಡಿಯಂ ಹೈಪೋಕ್ಲೋರೈಡ್ ವ್ಯವಸ್ಥೆಯಿದೆ. ಹಾಗೆಯೇ ಕಿಟಕಿಗಳಿಗೆ ಸೊಳ್ಳೆ ಪರದೆಯನ್ನು ಅಳವಡಿಸಲಾಗಿದೆ. ಪ್ಯಾಂಟ್ರಿ ಕಾರ್ ಹಾಗೂ ಆಹಾರ ವಿಬಾಗವೂ ಇದೆ ಎಂದು ನಳಿನ್ ತಿಳಿಸಿದರು.
ದೇಶದ ಕೊರೊನಾ ಹೋರಾಟದ ವೇಳೆ ನಾವು ಮೊದಲು ಮಂಗಳೂರಿನಲ್ಲಿ ಸಭೆ ಮಾಡಿದ್ದೇವೆ. ಕೊರೊನಾ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯನ್ನು ಮೀಸಲಿಟ್ಟೆವು. ತಲಪಾಡಿ ಗಡಿ ಬಂದ್ ಮಾಡುವಂತಹ ಕಠಿಣ ಕ್ರಮಗಳನ್ನು ತೆಗೆದುಕೊಂಡೆವು. ಇದರಿಂದಾಗಿ ಬಹುತೇಕವಾಗಿ ಕೊರೊನಾ ಹರಡುವಿಕೆ ನಿಯಂತ್ರಣವಾಗಿದೆ ಎಂದರು.
ಈಗ ಪಾಸಿಟಿವ್ ಆಗಿದ್ದವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. 7 ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ ದೃಢಪಟ್ಟಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಆಸ್ಪತ್ರೆಗಳ ಮುಖ್ಯಸ್ಥರು, ಸಿಬಂದಿ, ಪೊಲೀಸರು ಹಾಗೂ ಸಾರ್ವಜನಿಕರಿಗೆ ಅಭಿನಂದನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈಲ್ವೇ ಇಲಾಖೆಯ ಕೋಚೆಂಗ್ ಡಿಪೊ ಮ್ಯಾನೇಜರ್ ರಾಜೇಶ್ ಕುಮಾರ್ ಮೀನಾ, ಏರಿಯಾ ಆಫೀಸರ್ ಶ್ರೀಧರನ್, ಎಸ್ಎಂಆರ್ ರಾಮಕುಮಾರ್, ಎಸ್ಎಸ್ಇ ಪ್ರವೀಣ್ ಉಪಸ್ಥಿತರಿದ್ದರು.