ಕುಂದಾಪುರ, ಸೆ18: ಪಾದಚಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆತ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಕೋಟ ಮೂರ್ಕೈನಲ್ಲಿ ಸೋಮವಾರ ಸಂಜೆ ನಡೆದಿದೆ.
ಗುಲ್ವಾಡಿ ನಿವಾಸಿ ಇಸ್ಮಾಯಿಲ್ ಘಟನೆಯಲ್ಲಿ ಮೃತಪಟ್ಟಿದ್ದು, ತನ್ನ ಹೆಂಡತಿ ಮನೆಗೆ ತೆರಳಿ ಅಲ್ಲಿಂದ ವಾಪಾಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಇಸ್ಮಾಯಿಲ್ ವೃತ್ತಿಯಲ್ಲಿ ಬಸ್ ಕಂಡೆಕ್ಟರ್ ಆಗಿದ್ದು, ಸೋಮವಾರ ಮಧುವನದಲ್ಲಿರುವ ಹೆಂಡತಿ ಮನೆಗೆ ತೆರಳಿದ್ದಾನೆ. ಆದರೆ ಸಂಜೆ ವೇಳೆ ಅಲ್ಲಿಂದ ವಾಪಾಸಾಗಿ ಕೋಟ ಮೂರ್ಕೈಗೆ ಬಂದಿದ್ದಾನೆ. ಕುಂದಾಪುರಕ್ಕೆ ತೆರಳಲು ರಸ್ತೆಯ ಪೂರ್ವ ಬದಿಯಿಂದ ಪಶ್ಚಿಮ ಕಡೆಗೆ ದಾಟುತ್ತಿದ್ದ ಸಂದರ್ಭ ಉಡುಪಿ ಕಡೆಯಿಂದ ಕುಂದಾಪುರ ಕಡೆ ಇಕೋ ಕಾರು ಬರುತ್ತಿದ್ದು, ಅದನ್ನು ಗಮನಿಸದ ಇಸ್ಮಾಯಿಲ್ ರಸ್ತೆ ದಾಟಿದ್ದಾನೆ. ಈ ವೇಳೆ ಕಾರು ಬಂದು ರಭಸವಾಗಿ ಢಿಕ್ಕಿ ಹೊಡೆದ ಪರಿಣಾಮ ಇಸ್ಮಾಯಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಇಸ್ಮಾಯಿಲ್ ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಘಟನೆ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.