ಮೂಡುಬಿದಿರೆ, ಎ.13 (DaijiworldNews/PY) : ವ್ಯಕ್ತಿಯೋರ್ವರು ತಮ್ಮ ಮದ್ದು ಹಾಗು ವೈದ್ಯಕೀಯ ದಾಖಲೆಗಳನ್ನು ಮನೆಗೆ ಹೋಗುವ ತುರಾತುರಿಯಲ್ಲಿ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದು, ಇದನ್ನು ನಂತರ ಗಮನಿಸಿದ ಚಾಲಕ ವೈದ್ಯಕೀಯ ದಾಖಲೆಗಳನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.
ಇತ್ತೀಚೆಗೆ ಆಂಜಿಯೋಪ್ಲಾಸ್ಟಿ ಆದ ವ್ಯಕ್ತಿ ತಮ್ಮ ಮದ್ದು ಹಾಗೂ ವೈದ್ಯಕೀಯ ದಾಖಲೆಗಳನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದರು. ಈ ಮದ್ದುಗಳು ಜೀವರಕ್ಷಕ ಮದ್ದಾಗಿದ್ದು ಬಹಳ ಪರಿಶ್ರಮದಿಂದ ರೋಗಿಯು ಖರೀದೀ ಮಾಡಿ ಅವಸರದಲ್ಲಿ ಮನೆಗೆ ಹೋಗುವ ಸಂದರ್ಭ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ರಿಕ್ಷಾ ಚಾಲಕ ತ್ಹೌಸಿಫ್ ಕೂಡಲೇ ಅದರಲ್ಲಿ ನಮೂದಿಸಿದ ವೈದ್ಯರ ಮೊಬೈಲಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಈ ವಿಷಯ ತಿಳಿದ ತಕ್ಷಣ ಆಸ್ಪತ್ರೆಯ ಹೌಸ್ ಕೀಪಿಂಗ್ ಸಹಾಯಕಿ ಭಾರತಿ ಅವರು ತಕ್ಷಣ ರೋಗಿಯ ಮೊಬೈಲ್ ನಂಬರನ್ನು ದಾಖಲೆಯಿಂದ ಪರಿಶೀಲಿಸಿ ಎರಡೂ ಪಂಗಡದವರಿಗೆ ತಿಳಿಸಿದ್ದು, ತ್ಹೌಸಿಫ್ ಅವರು ರೋಗಿಯ ಮೊಬೈಲ್ ನಂಬರ್ ಪಡೆದುಕೊಂಡು ಅವರ ವಿಳಾಸಕ್ಕೆ ವೈದ್ಯಕೀಯ ದಾಖಲೆಗಳನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೊರೊನಾ ಮಹಾಮಾರಿಯಿಂದ ಇಡೀ ವಿಶ್ವವೇ ಕಂಗಾಲಾಗಿರುವ ಸಂದರ್ಭ ತಮ್ಮ ಕರ್ತವ್ಯ ನಿಷ್ಠೆಯಿಂದ ಈ ರಿಕ್ಷಾ ಚಾಲಕನ ನಡವಳಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.