ಉಡುಪಿ, ಎ.13 (Daijiworld News/MB) : ಯುವಕನೋರ್ವ ರಸ್ತೆಯಲ್ಲಿ ನೋಟನ್ನು ಹರಡಿದ್ದು ಜನರೆಲ್ಲಾ ಅದನ್ನು ಹೆಕ್ಕಲು ಮುಗಿಬಿದ್ದ ಘಟನೆ ಇಲ್ಲಿನ ವಾದಿರಾಜ ರಸ್ತೆಯಲ್ಲಿ ಸೋಮವಾರ ನಡೆದಿದೆ.
ಈ ಯುವಕನ ಕೈಯಲ್ಲಿ ಎರಡು ಸಾವಿರ, ಐನೂರು ಹಾಗೂ ಇನ್ನೂರರ ನೋಟುಗಳ ಕಂತೆಗಳಿದ್ದು ನಡೆದುಕೊಂಡು ಹೋಗುತ್ತಾ ಇದನ್ನು ರಸ್ತೆಯಲ್ಲಿ ಚೆಲ್ಲುತ್ತಾ ಹೋಗಿದ್ದಾನೆ. ಈ ಸಂದರ್ಭದಲ್ಲಿ ಆಶ್ಚರ್ಯಗೊಂಡ ಜನರು ಹಣ ಹೆಕ್ಕಲೆಂದೆ ಮುಗಿಬಿದಿದ್ದಾರೆ. ಆದರೆ ಆ ಬಳಿಕ ಆ ನೋಟುಗಳು ಜೆರಾಕ್ಸ್ ಮಾಡಲಾದ ನಕಲಿ ನೋಟುಗಳು ಎಂದು ತಿಳಿದು ಬಂದಿದ್ದು ಜನರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಆತ ಆ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಯುವಕನ ಬಳಿ ಎರಡಕ್ಕಿಂತಲೂ ಹೆಚ್ಚು ನೋಟಿನ ಬಂಡಲ್ಗಳು ಇದ್ದವು ಎಂದು ಹೇಳಲಾಗಿದ್ದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮಧುಕರ್ ಮುದ್ರಾಡಿ ರಸ್ತೆಯಲ್ಲಿ ಚೆಲ್ಲಿದ್ದ ಎಲ್ಲಾ ನೋಟುಗಳನ್ನು ಸಂಗ್ರಹಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತಾಗಿ ಮಧುಕರ್ ಮುದ್ರಾಡಿ ಮಾತನಾಡಿ, ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ನ್ನು ನೋಟಿನ ಮೂಲಕ ಸಾಂಕ್ರಾಮಿಕವಾಗಿ ಹರಡಲಾಗುತ್ತದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ದುಷ್ಕರ್ಮಿಗಳು ಜರಲ್ಲಿ ಆತಂಕ ಸೃಷ್ಟಿಸಲೆಂದು ಈ ರೀತಿ ಮಾಡಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.