ಮಂಗಳೂರು, ಏ 13 (Daijiworld News/MSP): ಚೆಂಬುಗುಡ್ಡೆ ಮಸೀದಿಯಲ್ಲಿ ವಾರದ ಹಿಂದೆ ಪ್ರಾರ್ಥನೆ ಸಲ್ಲಿಸಿದ ಸ್ಥಳಿಯ ನಿವಾಸಿಯೋರ್ವನಿಗೆ ಕೊರೊನಾ ದೃಢಪಟ್ಟ ಹಿನ್ನಲೆ ಸುತ್ತಮುತ್ತಲಿನ ಜನರು ಆರೋಗ್ಯ ತಪಾಸಣೆಗೆ ಒಳಗಾಗಬೇಕೆಂದು ಮಾಜಿ ಸಚಿವ ಯು ಟಿ ಖಾದರ್ ಅವರು ಇಲ್ಲಿನ ಮಸೀದಿ ಮೈಕ್ ಮೂಲಕ ಮನವಿ ಮಾಡಿದ್ದಾರೆ.
ದೆಹಲಿಗೆ ತೆರಳಿದ್ದ ತೊಕ್ಕೊಟ್ಟು ಮೂಲದ ವ್ಯಕ್ತಿಯಲ್ಲಿ ಕೋವಿಡ್-19 ಸೋಂಕು ಇರುವುದು ದೃಢವಾಗಿತ್ತು. ಆತ ಚೆಂಬುಗುಡ್ಡೆ ಮಸೀದಿಗೆ ಹಲವು ಬಾರಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿರುವ ಹಿನ್ನೆಲೆ ಸುತ್ತಮುತ್ತಲಿನ ಮುಸ್ಲಿಂ ಬಾಂಧವರು ಮತ್ತು ನಾಗರಿಕರು ತಪಾಸಣೆಗೆ ಒಳಗಾಗುವಂತೆ ಶಾಸಕ ಖಾದರ್ ಮೈಕ್ ಮೂಲಕ ಮನವಿ ಮಾಡಿದರು.
ಉಳ್ಳಾಲ ನರಗಸಭೆಯ ವ್ಯಾಪ್ತಿಯ ಚೆಂಬುಗುಡ್ಡೆ ನಾಗರಿಕರೊಬ್ಬರಿಗೆ ಇತ್ತೀಚೆಗೆ ಕೋರೋನಾ ಸೋಂಕು ಬಂದ ಹಿನ್ನಲೆಯಲ್ಲಿ ಚೆಂಬುಗುಡ್ಡೆ ಮಸೀದಿಯಲ್ಲಿ ಪರಿಸರದ ಎಲ್ಲಾ ನಾಗರಿಕರ ಕೋವಿಡ್ 19 ಟೆಸ್ಟ್ ಗೆ ವ್ಯವಸ್ಥೆ ಮಾಡಲಾಗಿದೆ. ಚೆಂಬುಗುಡ್ಡೆ ಪರಿಸರದ ಸರ್ವ ನಾಗರಿಕರು ಆರೋಗ್ಯ ಇಲಾಖೆ ತಂಡದ ಜೊತೆ ಸಹಕರಿಸಬೇಕು. ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ಒಳಪಡುವಂತೆ ಯು ಟಿ ಖಾದರ್ ಮಸೀದಿ ಮೈಕ್ ನಲ್ಲಿ ಮನವಿ ಮಾಡಿದರು. ಸ್ವತಃ ತಾನು ಕೂಡ ತಪಾಸಣೆಗೆ ಒಳಗಾದರು. ಖಾದರ್ ಅವರ ಮನವಿ ಹಿನ್ನೆಲೆ ಬಹಳಷ್ಟು ನಾಗರಿಕರು ಸ್ವಯಂ ಪ್ರೇರಿತವಾಗಿ ಆಗಮಿಸಿ ತಪಾಸಣೆಗೆ ಒಳಪಟ್ಟರು.