ಬಂಟ್ವಾಳ, ಏ 13 (Daijiworld News/MSP): ಬಂಟ್ವಾಳ ತಾಲೂಕಿನ ಮಂಗಳೂರು - ಧರ್ಮಸ್ಥಳ ಹೆದ್ದಾರಿಯ ಮೂರ್ಜೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಹೀಗಾಗಿ ಸ್ಥಳೀಯ ಜನರಿಗೆ ಚಿರತೆಯ ಭಯ ಶುರುವಾಗಿದೆ. ಮೂರ್ಜೆಯ ಹೆದ್ದಾರಿಯ ಮೂಲಕ ಚಿರತೆ ರಾತ್ರಿ 8.30ರ ವೇಳೆ ರಾಜರೋಷವಾಗಿ ನಡೆದುಕೊಂಡು ಬರುವ ದೃಶ್ಯವನ್ನು ಕಣ್ಣಾರೆ ಕಂಡ ಜನ ಭಯ ಬೀತರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಚಿರತೆಯ ಮೂರ್ಜೆ ರಸ್ತೆಯ ಮೂಲಕ ಬಂದು ಬಳಿಕ ಪೆಟ್ರೋಲ್ ಪಂಪ್ ನ ಸನಿಹ ಗುಡ್ಡದಲ್ಲಿ ಹತ್ತಿ ಹೋಗಿರುವ ದೃಶ್ಯ ಸ್ಥಳೀಯ ನಿವಾಸಿಯೊಬ್ಬರ ಮನೆಯ ಸಿ.ಸಿ.ಕ್ಯಾಮರಾದಲ್ಲೂ ರೆಕಾರ್ಡ್ ಅಗಿದೆ. ಇದಲ್ಲದೆ ಸ್ಥಳೀಯ ಗ್ರಾ.ಪಂ.ಸದಸ್ಯೆ ವಸಂತಿ ಎಂಬವರ ಮನೆಯಂಗಳದಲ್ಲಿ ಅವರಿಗೆ ಕಾಣಸಿಕ್ಕಿದೆ . ಮತ್ತೊಂದು ಮನೆಯ ಬಳಿಯಿರುವ ಬಾವಿಯಲ್ಲಿ ನೀರು ಕುಡಿದು ವಾಪಾಸು ಹೋಗಿದೆ ಎಂದು ಹೇಳಲಾಗಿದೆ.
ಮೂರ್ಜೆ ಭಾಗದ ವ್ಯಕ್ತಿಯೋರ್ವರ ನಾಯಿ ನಾಪತ್ತೆಯಾಗಿದ್ದು ಚಿರತೆ ಕೊಂಡುಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಅದಕ್ಕೂ ಮುಂಚಿನ ದಿನ ಶನಿವಾರ ಮುಂಜಾನೆ ವೇಳೆ ಮೂರ್ಜೆಯ ನೆಕ್ಕಿದರವು ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವ ಕಾರ್ಮಿಕ ನನ್ನು ಅಟ್ಟಿಸಿಕೊಂಡು ಬಂದಿದೆ ಎಂದು ಹೇಳುತ್ತಾರೆ.
ಮಾಹಿತಿ ತಿಳಿದ ವೇಣೂರು ಅರಣ್ಯಾಧಿಕಾರಿ ಸುನಿಲ್ ಕುಮಾರ್ ಹಾಗೂ ಅವರ ತಂಡ ತಡ ರಾತ್ರಿವರೆಗೂ ಕಾರ್ಯಚರಣೆ ನಡೆಸಿದ್ದರು. ಆದರೂ ಚಿರತೆಯ ಸುಳಿವು ಸಿಕ್ಕಿಲ್ಲ. ಕಳೆದ ಎರಡು ದಿನಗಳಿಂದ ರಾಜರೋಷವಾಗಿ ತಿರುಗುತ್ತಿರುವ ಚಿರತೆ ಜನರಿಗೆ ದಾಳಿ ನಡೆಸಬಹುದೇ ಎಂಬ ಆತಂಕ ಸ್ಥಳೀಯರನ್ನು ಕಾಡತೊಡಗಿದೆ.