ಉಳ್ಳಾಲ, ಎ.13 (DaijiworldNews/PY) : ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ರಾಜ್ಯದ ಇತರ ಜಿಲ್ಲೆಗಳ ಗಡಿ ಪ್ರದೇಶ ಮತ್ತು ಜಿಲ್ಲೆಯನ್ನು ಸಂಪರ್ಕಿಸುವ ಕೇರಳ ರಾಜ್ಯದ ಗಡಿಗಳನ್ನು ಬಂದ್ ಮಾಡಿದ್ದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದ್ದು, ಕಾಸರಗೋಡಿನಿಂದ ಆಗಮಿಸುವ ರೋಗಿಗಳಿಗೆ ಸುಪ್ರಿಂ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ನೀಡಿರುವ ಷರತ್ತಿನಂತೆ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಗಡಿ ಪ್ರದೇಶ ತಲಪಾಡಿಯಲ್ಲಿ ಜಿಲ್ಲೆಯ ಪೊಲೀಸರು ಮತ್ತು ಆರೋಗ್ಯ ಇಲಾಖೆ ಶ್ಲಾಘನೀಯ ಕಾರ್ಯ ನಿರ್ವಹಿಸುತ್ತಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು.
ಕಾಸರಗೋಡು -ಮಂಗಳೂರು ನಡುವಿನ ಅಂತರಾಜ್ಯ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಪೊಲೀಸ್ ಬಂದೋಬಸ್ತ್ ಮತ್ತು ಕಾಸರಗೋಡಿನಿಂದ ಆಗಮಿಸುವ ರೋಗಿಗಳನ್ನು ತಪಾಸಣೆ ನಡಸುವ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು, ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ 21 ಗಡಿ ಪ್ರದೇಶಗಳನ್ನು ಬಂದ್ ಮಾಡಲಾಗಿದೆ. ಅದರಲ್ಲಿ ಪ್ರಮುಖವಾದ ಗಡಿ ಭಾಗ ತಲಪಾಡಿ ಆಗಿದೆ. ಮುಖ್ಯವಾಗಿ ನೆರೆಯ ಕಾಸರಗೋಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನಲೆಯಲ್ಲಿ ಮತ್ತು ಕಾಸರಗೋಡಿನಿಂದ ಆಗಮಿಸುವ ರೋಗಿಗಳಿಂದ ಮಂಗಳೂರಿನ ಆಸ್ಪತ್ರೆಗಳನ್ನು ನಿಯಂತ್ರಣದಲ್ಲಿಡಲು ಕಠಿಣ ಕ್ರಮ ಕೈಗೊಂಡಿದ್ದರಿಂದ ಮಂಗಳೂರು ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಲು ಸಾಧ್ಯವಾಗಿದೆ. ಈಗಾಗಲೇ 12 ಸೋಂಕಿತರಲ್ಲಿ 7 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಯಾವುದೇ ಸೋಂಕಿತರು ದಾಖಲಾಗಿಲ್ಲ ಎಂದ ಅವರು ಮಾನವೀಯ ನೆಲೆಯಲ್ಲಿ ಕಾಸರಗೋಡಿಗೆ ಅಗತ್ಯ ವಸ್ತುಗಳ ಗೂಡ್ಸ್ ವಾಹನಗಳಿಗೆ ಮತ್ತು ತುರ್ತು ವಾಹನಗಳಿಗೆ ಅವಕಾಶ ನೀಡಿದ್ದು, ತುರ್ತು ಅವಶ್ಯಕತೆಯಿರುವ ಕೊರೊನಾ ಹೊರತುಪಡಿಸಿದ ರೋಗಿಗಳಿಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಆರೋಗ್ಯ ವ್ಯವಸ್ಥೆ ದುರುಪಯೋಗ ಮಾಡಿದರೆ ಕಠಿಣ ಕ್ರಮ - ಕೋಟಾ ಶ್ರೀನಿವಾಸ ಪೂಜಾರಿ
ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ತುರ್ತು ಚಿಕಿತ್ಸೆಗೆ ಆಗಮಿಸುವ ರೋಗಿಗಳಿಗೆ ಸುಪ್ರಿಂ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ಷರತ್ತಿನ ಮೇಲೆ ಮಂಗಳೂರಿನಲ್ಲಿ ಚಿಕಿತ್ಸೆಗೆ ಅವಕಾಶ ನೀಡಿದೆ. ಈ ಅವಕಾಶವನ್ನು ದುರುಪಯೋಗ ಪಡಿಸುವ ಕಾರ್ಯ ನಡೆದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ತಲಪಾಡಿಯಲ್ಲಿ ಕೇರಳದಿಂದ ಆಗಮಿಸುವ ರೋಗಿಗಳನ್ನು ನಮ್ಮದೇ ಆರೋಗ್ಯ ಇಲಾಖೆಯ ತಂಡ ಪರೀಕ್ಷೆ ಮಾಡಿ ಆಸ್ಪತ್ರೆಗೆ ಕಳುಹಿಸುವ ಕಾರ್ಯ ಮಾಡುತ್ತಿದೆ. ಈ ನಡುವೆ ಕೆಲವೊಂದು ರೋಗಿಗಳ ಕಡೆಯವರು ಆಸ್ಪತ್ರೆಯಲ್ಲಿ ಸರಿಯಾಗಿ ಸ್ಪಂದಿಸದೆ ಅನುಚಿತವಾಗಿ ವರ್ತಿಸಿದ್ದು,ಆಸ್ಪತ್ರೆಯಿಂದ ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ ಗಡಿಪ್ರದೇಶಗಳನ್ನು ಕಟ್ಟು ನಿಟ್ಟಾಗಿ ನಿರ್ವಹಿಸಿದರಿಂದ ಕೊರೊನಾ ಸೋಂಕನ್ನು ತಡೆಯಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ,ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಕ್ಷೇತ್ರ ಪ್ರ.ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಕೋಶಾಧಿಕಾರಿ ಜಿತೇಂದ್ರ ಶೆಟ್ಟಿ ತಲಪಾಡಿ, ಕಾರ್ಯದರ್ಶಿ ನವೀನ್ ಶೆಟ್ಟಿ ಕುರ್ನಾಡು, ಶಾನು ತಲಪಾಡಿ, ಎಸಿಪಿ ಕೋದಂಡರಾಮ, ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.