ಮಂಗಳೂರು, ಏ 13 (DaijiworldNews/SM): ದ.ಕ. ಜಿಲ್ಲೆಯ ಜನತೆ ಮತ್ತೊಂದು ಗುಡ್ ನ್ಯೂಸ್ ಲಭ್ಯವಾಗಿದ್ದು, ಜಿಲ್ಲೆಯಲ್ಲಿದ್ದ ಮತ್ತೋರ್ವ ಕೊರೊನಾ ಸೋಂಕಿತ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿತ ಸುಳ್ಯದ ವ್ಯಕ್ತಿ ಗುಣಮುಖರಾಗಿದ್ದು ಇದೀಗ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.
ದುಬೈಯಿಂದ ಮಂಗಳೂರಿಗೆ ಆಗಮಿಸಿದ್ದ ಸುಳ್ಯ ಮೂಲದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಲಕ್ಷಣಗಳು ಪತ್ತೆಯಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಮಾರ್ಚ್ 18ರಂದು ಸುಳ್ಯ ಮೂಲದ ವ್ಯಕ್ತಿ ದುಬೈನಿಂದ ಮಂಗಳೂರಿಗೆ ಆಗಮಿಸಿ ತನ್ನ ಮನೆಗೆ ತೆರಳಿದ್ದರು. ಮನೆಯಲ್ಲೇ ನಿಗಾದಲ್ಲಿದ್ದರು. ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮಾರ್ಚ್ 28ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 31ರಂದು ಕೊರೊನಾ ಸೋಂಕು ದೃಢಪಟ್ಟಿದ್ದು, ನಿರಂತರ ಚಿಕಿತ್ಸೆ ನೀಡಲಾಗಿದೆ. ಇದೀಗ ಚಿಕಿತ್ಸೆಗೆ ಸ್ಪಂದಿಸಿದ ಅವರು, ಸಂಪೂರ್ಣ ಗುಣಮುಖರಾಗಿದ್ದಾರೆ.
ಏ. 11, 12ರಂದು ಮತ್ತೆ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಏಪ್ರಿಲ್ ೧೩ರ ಸೋಮವಾರದಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯ ತನಕ 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಅವರ ಪೈಕಿ ಎಂಟು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನು ಕೂಡ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.