ಬೆಳ್ತಂಗಡಿ, ಏ 14 (Daijiworld News/MSP): ಗ್ರಾಹಕರಲ್ಲಿ ಸಾಮಾಜಿಕ ಅಂತರವೂ ಇಲ್ಲ, ವ್ಯಾಪಾರಿಗಳಿಗೆ ಸರಕಾರದ ಸೂಚನೆ ಪಾಲಿಸಬೇಕೆಂಬ ಜ್ಞಾನವೂ ಇಲ್ಲ ಎಂಬಂಥ ವಾತಾವರಣ ಬೆಳ್ತಂಗಡಿ ಪೇಟೆಯಲ್ಲಿ ಸೋಮವಾರ ಕಂಡು ಬಂದಿದ್ದು ಸರಕಾರದ ಸೂಚನೆ ಗಾಳಿಗೆ ತೂರಿದಂತಾಯಿತು.
ದಿನಬಳಕೆಯ ವಸ್ತುಗಳ ಅಂಗಡಿಯೊಂದಿಗೆ ಪ್ಯಾನ್ಸಿ, ಚಪ್ಪಲಿ, ಹಾರ್ಡ್ ವೇರ್, ಜೆರಾಕ್ಸ್, ಹೊಟೇಲ್, ಕೋಲ್ಡ್ ಹೌಸ್ ಗಳು, ಪೈಪುಗಳು-ಫಿಟ್ಟಿಂಗ್ ಗಳು, ವಿದ್ಯುತ್ ಉಪಕರಣಗಳ ಮಳಿಗೆ ಹೀಗೆ ಎಲ್ಲ ಅಂಗಡಿಗಳನ್ನು ತೆರೆದು ರಾಜಾರೋಷವಾಗಿ ಸರಕಾರಕ್ಕೇ ಸವಾಲು ಹಾಕಿ ವ್ಯವಹಾರ ನಡೆಸುವ ದೃಶ್ಯ ಸಾಮಾನ್ಯವಾಗಿತ್ತು. ಇದು ಎಪ್ರಿಲ್ 13ರ ಸೋಮವಾರ ವಾರದ ಸಂತೆಯ ದಿನ ಬೆಳ್ತಂಗಡಿ ಪೇಟೆಯಲ್ಲಿ ಕಂಡುಬಂದ ದೃಶ್ಯ. ಕೊರೋನಾ ಸೋಂಕು ಹರಡುವಿಕೆ ತಡೆಯಲು ತಾಲೂಕು ದಂಡಾಧಿಕಾರಿ ಘೋಷಿಸಿದ 144ಸೆಕ್ಷನ್ನಿನ ನಿಷೇದಾಜ್ಞೆ ಹಾಗೂ ವಾರದ ಸಂತೆ ರದ್ಧತಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲಿ ಇರಲಿಲ್ಲ.
ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯ ಮಾಲೀಕತ್ವದ ಗಂಗಾ-ಯಮುನಾ ಅಂಗಡಿಯೇ ತೆರೆದಿತ್ತು ಎಂದರೆ ಇಲ್ಲಿ ಇತರ ವ್ಯಾಪಾರಿಗಳಿಗೆ ನೀತಿ ಹೇಳುವ ನೈತಿಕತೆ ಅಧಿಕಾರಿಗಳಿಗೆ ಎಲ್ಲಿಂದ ಬರಬೇಕು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಪಾಪ, ಬಡಪಾಯಿ ಪೊಲೀಸರು ಸುವ್ಯವಸ್ಥೆಯ ನಿರ್ವಹಣೆಗೆ ಪಡುವ ಶ್ರಮವನ್ನು ಕಂಡಾಗ ಈ ಪೊಲೀಸರ ಬಗ್ಗೆ ಅಭಿಮಾನ ಮಾತ್ರವಲ್ಲ, ಮರುಕವೂ ಹುಟ್ಟುತ್ತದೆ.
ಶಾಸಕರ ಸಹಿತ ಎಲ್ಲ ಜನಪ್ರತಿನಿಧಿಗಳೊಂದಿಗೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಇನ್ನಾದರೂ ಕೊರೋನಾ ಸೋಂಕು ಹರಡುವಿಕೆ ತಡೆಯಲು ಸರಕಾರಗಳು ಸೂಚಿಸಿದ ಮುಂಜಾಗ್ರತಾ ಕ್ರಮವನ್ನು ಕಟ್ಟುನಿಟ್ಟಾಗಿ ಅನುಷ್ಟಾನಿಸಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ಯಾವುದೇ ಕಾರಣಕ್ಕೂ ಕೊರೋನಾ ಮಹಾಮಾರಿ ನಮ್ಮ ಊರಿಗೆ ಬರದಂತಾಗಲಿ, ಬಹುತೇಕರು ಸರಕಾರದ ಆದೇಶ ಪಾಲಿಸುತ್ತಿದ್ದಾರೆ. ಆದರೆ ಕೆಲ ಮಂದಿ ವ್ಯವಸ್ಥೆಗೆ ಹಾಕುವ ಸವಾಲು ಎಲ್ಲರಿಗೂ ಸಮಸ್ಯೆ ತಂದೊಡ್ಡಲಿದೆ ಎಂಬ ಆತಂಕ ಜನರಲ್ಲಿ ಮೂಡಿದೆ.