ಮಲ್ಪೆ, ಎ.14 (Daijiworld News/MB) : ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಮಾಡಲಾಗಿದ್ದು ಎಲ್ಲಾ ಬಾರ್, ಶಾಪಿಂಗ್ ಮಾಲ್ ಮೊದಲಾದವುಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಮದ್ಯಪ್ರಿಯರಿಗೆ ಬಾರ್ ಮುಚ್ಚಿರುವುದು ಸಂಕಷ್ಟಕ್ಕೆ ಕಾರಣವಾಗಿದೆ. ಏತನ್ಮಧ್ಯೆ ಮದ್ಯ ಸಿಗದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ಹಾಗೂ ಬಾರ್ಗಳಲ್ಲಿ ಕಳ್ಳತನ ಮಾಡುವ ಘಟನೆ ಸಂಭವಿಸುತ್ತಲ್ಲೇ ಇದ್ದು ಕೆಮ್ಮಣ್ಣಿನಲ್ಲಿರುವ ಸರೋವರ ಬಾರ್ಗೆ ನುಗ್ಗಿದ ಖದೀಮರು 14,457 ರೂ. ಮೌಲ್ಯದ ಮದ್ಯವನ್ನು ಕಳವು ಮಾಡಿದ್ದಾರೆ.
ಎ. 10 ರಂದು ಬೆಳಗ್ಗೆ ಬಾರ್ನ ಕ್ಯಾಶಿಯರ್ ವಿನಯ ಮೊಗವೀರ ಅವರು ಬಾರ್ನ ಬಳಿ ಬಂದಾಗ ಮಾಡಿನ ಮೂರು ಹಂಚುಗಳನ್ನು ತೆಗೆದಿರುವುದು ಗಮನಕ್ಕೆ ಬಂದಿದೆ. ಆ ಕೂಡಲೇ ಅವರು ಒಳ ಹೋಗಿ ಪರಿಶೀಲನೆ ನಡೆಸಿದ್ದು ಕ್ಯಾಶ್ ಕೌಂಟರ್ನಲ್ಲಿರಿಸಲಾಗಿದ್ದ ಮದ್ಯದ ಬಾಟಲ್ಗಳು ಕಳವು ಆಗಿರುವುದು ಗಮನಕ್ಕೆ ಬಂದಿದೆ.
ಆ ಬಳಿಕ ಸ್ಥಳಕ್ಕೆ ಬಂದ ಬಾರ್ ಮಾಲಕರು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಸುಮಾರು 15,457 ರೂ. ಮೌಲ್ಯದ ವಿಸ್ಕಿ ಕಳವಾಗಿರುವುದು ತಿಳಿದು ಬಂದಿದೆ. ಈ ಕುರಿತಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ದೇರಳಕಟ್ಟೆ ನಿತ್ಯಾನಂದ ನಗರ ವೈನ್ ಶಾಪ್ ದೋಚಿದ ಕಳ್ಳನನ್ನು ಕೊಣಾಜೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಳ್ಳಾರಿಯಲ್ಲಂತೂ ಅಬಕಾರಿ ಕಚೇರಿಯಲ್ಲಿ ಇರಿಸಲಾಗಿರುವ ಮದ್ಯವನ್ನೇ ಮದ್ಯ ವ್ಯಸನಿಗಳು ಕಳವು ಮಾಡಿದ್ದಾರೆ.