ಸುರತ್ಕಲ್, ಮಾ 04: ಇಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ , ತಾತ್ಕಾಲಿಕ ಮಾರುಕಟ್ಟೆ ಕಟ್ಟಡವನ್ನು ಒಡೆದು ಬದಲಾವಣೆ ಮಾಡಿಕೊಂಡ ಅಂಗಡಿ ಮಾಲಕರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರತ್ಕಲ್ನಲ್ಲಿ ಹೊಸ ಮಾರುಕಟ್ಟೆಯ ನಿರ್ಮಾಣಕ್ಕಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿದ್ದವರನ್ನು ಸ್ಥಳಾಂತರಿಸಲು ಸುಮಾರು ೫ ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ನಲ್ಲಿ ತಾತ್ಕಾಲಿಕವಾಗಿ ಹೊಸ ಮಾರುಕಟ್ಟೆ ಕಟ್ಟಡವನ್ನು ನಿರ್ಮಿಸಲಾಗಿದೆ.
ಸುರತ್ಕಲ್ ಮೈದಾನದಲ್ಲಿ 231 ತಾತ್ಕಾಲಿಕ ಅಂಗಡಿ ಶೆಡ್ಗಳನ್ನು ನಿರ್ಮಿಸಲಾಗಿದ್ದು .ವಿದ್ಯುತ್, ನೀರು, ಇಂಟರ್ ಲಾಕ್ ವ್ಯವಸ್ಥೆಯನ್ನು ಅಂಗಡಿಗಳಿಗೆ ನೀಡಲಾಗಿದೆ. ಹಳೇ ಮಾರುಕಟ್ಟೆಯಲ್ಲಿ ನೋಂದಣಿ ಹೊಂದಿರುವ ಅಂಗಡಿಗಳನ್ನು ಗುರುತಿಸಿ, ಶೆಡ್ಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹಳೇ ಮಾರುಕಟ್ಟೆ 40 ಚದರ ಅಡಿಗಳಷ್ಟಿದ್ದರೆ ಹೊಸ ಮಾರುಕಟ್ಟೆಯನ್ನು 60 ಚದರ ಅಡಿಗಳಂತೆ ನಿರ್ಮಿಸಲಾಗಿದೆ. ಪ್ರತಿಯೊಂದಕ್ಕೂ ಶೆಟರ್ ಅಳವಡಿಸಿ ಭದ್ರತೆ ನೀಡಲಾಗಿದೆ. ತರಕಾರಿ, ಹಣ್ಣು ಹಂಪಲು, ಹೂ, ಪ್ಲಾಸ್ಟಿಕ್ ವಸ್ತುಗಳು, ಚಪ್ಪಲಿ ಅಂಗಡಿಗಳು ಇಲ್ಲಿದ್ದು ಎಲ್ಲವೂ ಸ್ಥಳಾಂತರಗೊಳ್ಳಲಿದೆ. ಆದರೆ ಈ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಸರಣಿ ಅಂಗಡಿ ಪಡೆದಿರುವ ಕೆಲವು ಬಲಾಢ್ಯ ವರ್ತಕರು ಶಾಸಕರ ಬೆಂಬಲದೊಂದಿಗೆ ತಮಗೆ ತೋಚಿದಂತೆ ಮಾರುಕಟ್ಟೆ ಅಂಗಡಿಗಳನ್ನು ಒಡೆದು ಹಾಕಿ ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಡಿವೈಎಫ್ಐ ಪ್ರತಿಭಟನೆ ನಡೆಸಿತ್ತು. ಇದೀಗ ಅಂಗಡಿಗಳನ್ನು ಒಡೆದಿರುವ ಸುಮಾರು ಎಂಟು ಅಂಗಡಿಗಳ ಮಾಲಕರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.