ಉಡುಪಿ, ಏ 14 (Daijiworld News/MSP): ಕೊರೊನಾ ವೈರಸ್ ನಿಯಂತ್ರಣ ಕುರಿತಂತೆ, ಉಡುಪಿ ಜಿಲ್ಲೆಯ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದ, ಕಳೆದ 2 ವಾರಗಳಿಂದ ಯಾವುದೇ ಹೊಸ ಕೊರೋನ ಪ್ರಕರಣಗಳು ಕಂಡು ಬಂದಿಲ್ಲವಾದ ಕಾರಣ ಈ ಬಗ್ಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ.
ಉಡುಪಿ ಜಿಲ್ಲೆಯಲ್ಲಿ ಮಾರ್ಚ್ 29 ರಂದು ಕೊನೆಯ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ನಂತರದ ದಿನಗಳಲ್ಲಿ ಜಿಲ್ಲಾಡಳಿತ ಕೈಗೊಂಡ ಸಮರ್ಥ ನಿರ್ಧಾರಗಳಿಂದ , ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೊಸದಾಗಿ ಕಂಡು ಬಂದಿಲ್ಲ, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರು ಕಂಡು ಬಂದ ಕೂಡಲೇ , ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಗುರುತಿಸಿ. ಕ್ವಾರಂಟೈನ್ ಗೆ ಒಳಪಡಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಕಾರಣ, ಸೋಂಕು ಹರಡುವುದನ್ನು ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಅಲ್ಲದೇ ಜಿಲ್ಲೆಯ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದು, ಸರಕು ಸಾಗಾಣಿಕೆ ಮತ್ತು ತುರ್ತು ವೈದ್ಯಕೀಯ ಕಾರಣ ಹೊರತು ಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಜಿಲ್ಲೆಯೊಳಗೆ ಪ್ರವೇಶ ನಿರ್ಭಂದಿಸಿರುವುದರಿಂದ ಹೊರಜಿಲ್ಲೆಗಳಿಂದ ಸಹ ಸೋಂಕು ಹರಡುವುದನ್ನು ತಪ್ಪಿಸಲಾಗಿದೆ.
ಜಿಲ್ಲೆಯೊಳಗೆ ದಿನನಿತ್ಯದ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಸಮಯ ನಿಗಧಿಪಡಿಸಲಾಗಿದ್ದು, ಖರೀದಿ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಅನಗತ್ಯ ವಾಹನ ಸಂಚಾರ ನಿಭಂಧಿಸಲಾಗಿದೆ, ಜಿಲ್ಲೆಯಲ್ಲಿ ಅಗತ್ಯದ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ,ಜಿಲ್ಲೆಯಲ್ಲಿನ ಕಾರ್ಮಿಕರಿಗೆ, ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದು ಅವರಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯಲ್ಲಿನ ಯಾವುದೇ ನಾಗರೀಕನಿಗೆ ಹಸಿವೆಯ ಸಮಸ್ಯೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ, ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಆಹಾರದ ಕಿಟ್ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣ ಕುರಿತಂತೆ, ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧಗಳು ಮತ್ತು ಆದೇಶಗಳ ಪಾಲನೆಗೆ ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಲಾಕ್ ಡೌನ್ ಅವಧಿ ಮುಗಿಯುವವರೆಗೂ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವ ಮೂಲಕ , ಉಡುಪಿ ಜಿಲ್ಲೆ ಕೊರೋನಾ ಮುಕ್ತವಾಗಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ ಮನವಿ ಮಾಡಿದ್ದಾರೆ.