ಕಾಸರಗೋಡು, ಏ 14 (DaijiworldNews/SM): ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸಿಹಿ ಸುದ್ದಿ ಲಭಿಸುತ್ತಿದ್ದು, ಮೂರು ದಿನಗಳಲ್ಲಿ 44 ಮಂದಿ ಕೊರೋನಾ ಸೋಂಕಿನಿಂದ ಮುಕ್ತರಾಗಿದ್ದಾರೆ. ಮಂಗಳವಾರದಂದು ಕೇವಲ ಒಂದೇ ಒಂದು ಸೋಂಕು ಪ್ರಕರಣ ದಾಖಲಾಗುವ ಮೂಲಕ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲೆಯಲ್ಲಿ ಹೊಸ ಪ್ರಕರಣಗಳು ಕಡಿಮೆಯಾಗುತ್ತಿದೆ. ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲೆಯ ಆರೋಗ್ಯ ಇಲಾಖೆಯು ನಿಟ್ಟಿಸಿರು ಬಿಡುವಂತಾಗಿದೆ. ಮಂಗಳವಾರ ಕೇರಳದಲ್ಲಿ ಎಂಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಕಾಸರಗೋಡು ಜಿಲ್ಲೆಯ ಚೆಂಗಳ ನಿವಾಸಿಯಲ್ಲಿ ಸೋಂಕು ದೃಢಪಟ್ಟಿದೆ.
ದುಬೈನಿಂದ ಬಂದಿದ್ದ ಈತನಲ್ಲಿ ಸೋಂಕು ಕಂಡುಬಂದಿದ್ದು ಐಸೋಲೇಷನ್ ವಾರ್ಡ್ ನಲ್ಲಿದ್ದರು. ಇದುವರೆಗೆ ಜಿಲ್ಲೆಯಲ್ಲಿ 167 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 88 ಮಂದಿ ಮಾತ್ರ ಈಗ ಚಿಕಿತ್ಸೆಯಲ್ಲಿದ್ದಾರೆ. 79 ಮಂದಿ ರೋಗ ಮುಕ್ತರಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 9457 ಮಂದಿ ನಿಗಾದಲ್ಲಿದ್ದು, 136 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.