ಸುಳ್ಯ, ಏ 14 (DaijiworldNews/SM): ಕೊರೊನಾ ಲಾಕ್ ಡೌನ್ ನಿಂದಾಗಿ ದೇಶದೆಲ್ಲೆಡೆ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಆದರೆ, ಇದರ ಲಾಭವನ್ನು ಕಳ್ಳಬಟ್ಟಿ ಸಾರಾಯಿ ಪಡೆಯುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಕಳ್ಳಬಟ್ಟಿ ಸಾರಾಯಿ ತೆಗೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ತೊಡಿಕಾನ ಗ್ರಾಮದ ಕುದುರೆಪಾಯ-ಮಾಪಳಕಜೆ ಅಂತರ್ ಜಿಲ್ಲಾ ಸಂಪರ್ಕ ರಸ್ತೆಯ ಮೂಲಕ ಕಳ್ಳಬಟ್ಟಿ ಸಾರಾಯಿ ಸಾಗಾಟ ದಿನೇ ದಿನೇ ಹೆಚ್ಚುತ್ತಿದೆ.
ತೊಡಿಕಾನ -ಮಾಪಳಕಜೆ-ಕುದರೆಪಾಯ ರಸ್ತೆಯ ಮೂಲಕ ಜೀಪ್, ಬೈಕ್ ಹಾಗೂ ಇತರ ವಾಹನದ ಮೂಲಕ ಕೊಡಗಿನ ಕುರೆಪಾಯ ಭಾಗದಿಂದ ದ.ಕ ಜಿಲ್ಲೆಯ ತೊಡಿಕಾನ ಗ್ರಾಮ ಸೇರಿದಂತೆ ಇತರ ಭಾಗಗಳಿಗೆ ಹಾಡು ಹಗಲಿನಲ್ಲಿಯೇ ಕಳ್ಳಬಟ್ಟಿ ಸಾಗಾಟ ರಾಜರೋಷವಾಗಿ ನಡೆಯುತ್ತಿದೆ.
ಲಾಕ್ ಡೌನ್ ನಿಂದಾಗಿ ಎಲ್ಲಾ ಅಂತರ್ ಜಿಲ್ಲಾ ಸಂಪರ್ಕ ರಸ್ತೆಯನ್ನು ಬಂದ್ ಮಾಡಲಾಗಿದೆ. ಈ ರಸ್ತೆಯನ್ನು ಕೂಡ ಮರ ಇಟ್ಟು ಬಂದ್ ಮಾಡಲಾಗಿತ್ತು. ರಸ್ತೆಗೆ ಅಡ್ಡವಾಗಿ ಇರಿಸಿದ ಮರವನ್ನು ವಾಹನ ಸವಾರರು ತೆಗೆದಿದ್ದಾರೆ. ಇದರಿಂದ ರಸ್ತೆ ಮತ್ತೆ ಎಂದಿನಂತೆ ಸಂಚಾರಕ್ಕೆ ಅನುವನ್ನುಂಟು ಮಾಡುತ್ತಿದೆ. ಈ ಕಾರಣದಿಂದ ಈ ರಸ್ತೆಯಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರು ಮಾಡುವವರಿಗೆ ಮತ್ತು ಸಾಗಾಟ ಮಾಡುವವರಿಗೆ ಇದು ವರದಾನವಾಗಿ ಪರಿಣಮಿಸಿದೆ. ಈಗ ಎಲ್ಲಾರು ಮನೆಯಲ್ಲಿ ಕಾಲ ಕಳೆಯುವುದರಿಂದ ಕಳ್ಳ ಬಟ್ಟಿ ತಯಾರಿಸಲು ಇದು ಸಕಾಲ ಅಂದುಕೊಂಡಿದ್ದು ಕೊಡಗಿನ ಕುದುರೆಪಾಯ, ಕಟ್ಟೆಪಾರೆ ಇತರೆಡೆಗಳಲ್ಲಿ ಇತರ ಭಾಗದಲ್ಲಿ ಅವ್ಯಾಹತವಾಗಿ ಕಳ್ಳಬಟ್ಟಿ ಸಾರಾಯಿ ತಯಾರಿಸಲಾಗುತ್ತಿದೆ.