ಉಳ್ಳಾಲ, ಏ 14(DaijiworldNews/SM): ಲಾಕ್ ಡೌನ್ ನಡುವೆ ಪಾನೀರು ಅವರ್ ಲೇಡಿ ಆಫ್ ಮರ್ಸಿ ಚರ್ಚಿನಿಂದ ಕಳವುಗೈದ ಆರೋಪಿಯನ್ನು ಉಳ್ಳಾಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೋರ್ವ ಆರೋಪಿಯನ್ನು ಈಗಾಗಲೇ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರ ತಂಡ ಉಳ್ಳಾಲ ಭಾಗದ ಮೂರು ಶಾಲೆಗಳನ್ನು ಕಳವುಗೈದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಕೆ.ಸಿ ನಗರ ನಿವಾಸಿ ಸುಹೈಲ್(18) ಬಂಧಿತ. ಈತನ ಜತೆಗಿದ್ದ ನಾಟೆಕಲ್ ನಿವಾಸಿ ಫಯಾನ್(23) ಎಂಬಾತನನ್ನು ಕೊಣಾಜೆ ಪೊಲೀಸರು ಸೋಮವಾರ ಬಂಧಿಸಿದ್ದರು. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.
ಆರೋಪಿಗಳ ತಂಡ ಎಪ್ರಿಲ್ 4ರಂದು ಕೊಣಾಜೆ ಠಾಣಾ ವ್ಯಾಪ್ತಿಯ ನಿತ್ಯಾನಂದನಗರದಲ್ಲಿರುವ ಎಂಎಸ್ ಐಎಲ್ ನಿಂದ 23,000 ರೂಪಾಯಿ ಬೆಲೆಯ ಮದ್ಯ ಕಳವುಗೈದಿದ್ದರು. ಅಂದೇ ರಾತ್ರಿ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿರುವ ಪಾನೀರು ಅವರ್ ಲೇಡಿ ಆಫ್ ಮರ್ಸಿ ಚರ್ಚಿನಿಂದ ಕಾಣಿಕೆ ಡಬ್ಬಿಯನ್ನು ಒಡೆದು ಹಣ ದೋಚಿದ್ದರು. ಅಲ್ಲದೆ ಪರಮಪ್ರಸಾದ ಇಡುವ ಪೆಟ್ಟಿಗೆಯನ್ನು ಕೆಡವಿದ್ದರು.
ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿಗಳು ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿಯಲ್ಲಿ ಹೊರರಾಜ್ಯದ ಕಾರ್ಮಿಕರಿಗೆ ಅಧಿಕ ಬೆಲೆಯಲ್ಲಿ ಮದ್ಯ ಮಾರಾಟ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ಅಲ್ಲಿಂದ ಫಯಾನ್ ನನ್ನು ಸ್ಥಳೀಯರ ಸಹಕಾರದ ಜೊತೆಗೆ ವಶಪಡಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಶಾಲೆಗಳನ್ನು ದೋಚಿದ್ದ ಕಳ್ಳರು :
ಇಬ್ಬರು ಕೆಲವು ತಿಂಗಳುಗಳ ಹಿಂದೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿನ ಮಾಸ್ತಿಕಟ್ಟೆ ಭಾರತ್ ಶಾಲೆ, ಕೋಟೆಕಾರಿನ ಕಾರ್ಮೆಲ್ ಶಾಲೆ, ಉಚ್ಚಿಲದ ಭಗವತಿ ಶಾಲೆಯಿಂದಲೂ ಕಳವುಗೈದಿರುವುದು ಬೆಳಕಿಗೆ ಬಂದಿದೆ. ಬಂಧಿತರ ವಿರುದ್ಧ ಈ ಹಿಂದೆಯೂ ದ್ವಿಚಕ್ರ ವಾಹನ ಕಳವು ಕುರಿತ ಪ್ರಕರಣಗಳಿವೆ.