ಮಂಗಳೂರು, ಏ 14(DaijiworldNews/SM): ಕೊರೊನಾ ಮಹಾ ಮಾರಿಯಿಂದ ದೇಶ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಪ್ರಚೋದನಾಕಾರಿ ಸಂದೇಶಗಳನ್ನು ಹರಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪುತ್ತೂರು ತಾಲೂಕಿನ ಕಬಕ ಸಮೀಪದ ಉರಿಮಜಲು ನಿವಾಸಿ ಅಬ್ದುಲ್ ಬಶೀರ್ ಯಾನೆ ನಿಸಾರ್ ಅಹಮ್ಮದ್ ಹಾಗೂ ಪಣಕಜೆ ನಿವಾಸಿ ಮಹಮ್ಮದ್ ಇಲ್ಯಾಸ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಸಾಮಾಜಿಕ ಜಾಲತಾಣ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರ ವಿರುದ್ಧ ಅವಹೇಳನಕಾರಿಯಾಗಿ ಬರೆದಿದ್ದರು. ಅಲ್ಲದೆ ಗೃಹ ಸಚಿವರ ಭಾವ ಚಿತ್ರ ವಿಕೃತಗೊಳಿಸಿದ್ದರು. ಕೊರೊನಾ ರೋಗಕ್ಕೆ ಗೃಹ ಸಚಿವರು ಬಲಿಯಾಗಿದ್ದಾರೆ ಎಂಬುವುದಾಗಿ ವಿಕೃತವಾಗಿ ಬರೆದುಕೊಂಡಿದ್ದರು. ಅಲ್ಲದೆ, ಕೊರೊನಾಗಿಂತಲೂ ಮೋದಿ ಭಯಾನಕ ಎಂಬುವುದಾಗಿಯೂ ಪೋಸ್ಟ್ ಮಾಡಿದ್ದರು.
ಫೇಸ್ ಬುಕ್ ನ ಮೈಕಾಲ್ತೊ ಬಿಸಯಾ ಎಂಬ ಪೇಜ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಅವಹೇಳನ ಮಾಡಿದ್ದರು. ಇದಕ್ಕೆ ನಾಗರಿಕ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸೈಬರ್ ಪೊಲೀಸರ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಇನ್ನು ಆರೋಪಿಗಳು ಕೆಲವು ಸಂಘಟನೆಗಳ ಜತೆ ಸಂಬಂಧವನ್ನು ಹೊಂದಿದ್ದಾರೆ ಎಂಬುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಮತ್ತು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶಾಲವಾದ ನೆಟ್ವರ್ಕ್ನ ವಿವರಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.