ಮಂಗಳೂರು, ಮಾ 04 : ಮೃತ ವೃದ್ಧರೊಬ್ಬರ ಶವವನ್ನು ಮನೆಗೆ ಸ್ಥಳಾಂತರಿಸಲು ಊರಿನವರು ನಿರಾಕರಿಸಿದ ಕಾರಣ ಕೊನೆಗೆ ಪೊಲೀಸರೇ ಹೆಗಲು ಕೊಟ್ಟು ಮಾನವೀಯತೆ ಮೆರೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮೀಪದ ಕೊಯಿಲದ ಗುಡ್ಡದಲ್ಲಿ ನಡೆದಿದೆ. 80 ವರ್ಷದ ಅಸಲಪ್ಪ ಎಂಬುವರು 20 ವರ್ಷಗಳಿಂದ ಕೊಯಿಲದ ಗುಲ್ಲೊಡಿಯಲ್ಲಿ ವಾಸವಾಗಿದ್ದರು. ಇವರು ಶನಿವಾರ ಮಧ್ಯಾಹ್ನ ಜಂಬದಹಳ್ಳಿಗೆ ಹೋಗಲು ಕಾಲುದಾರಿ ನಡೆದುಕೊಂಡು ಹೋಗುವಾಗ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದರು.
ಅತ್ತ ಕಡೆ ಮಾ. 04 ರ ಭಾನುವಾರದಿಂದ ದೈವದ ನೇಮ ಮತ್ತು ಜಾತ್ರೆ ಪ್ರಾರಂಭವಾಗುವುದಿತ್ತು. ಆದರೆ ಗ್ರಾಮಸ್ಥರಾರು ಶವ ಮುಟ್ಟಿದರೆ ಮೈಲಿಗೆ ಆಗುತ್ತದೆ ಎಂದು ಮೃತದೇಹ ಇರುವ ಸ್ಥಳಕ್ಕೆ ಬರಲು ಒಪ್ಪಿರಲಿಲ್ಲ. ಮೃತ ವ್ಯಕ್ತಿಯ ಕುಟುಂಬ ತೀರಾ ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಗೆ ಬೇರೆ ದಾರಿ ಕಾಣದೆ ಮಗ ರವಿ ಚಿಂತಾಕ್ರಾಂತರಾಗಿ ಪೊಲೀಸರಿಗೆ ವಿಷಯ ಮುಟ್ಟಿಸಿದಾಗ ಪೊಲೀಸ್ ಅಧಿಕಾರಿಗಳು ಮೃತರ ಮಗನೊಂದಿಗೆ ಸೇರಿಕೊಂಡು ಶವ ಹೊರಲು ಹೆಗಲು ಕೊಟ್ಟರು . ಬಳಿಕ ಅಸಲಪ್ಪ ಅವರ ಜಮೀನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಹೀಗಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮೃತದೇಹ ಹೊರಲು ನೆರವಾಗುವ ಮೂಲಕ ಎಲ್ಲರಿಂದಲೂ ಅಭಿನಂದನೆಗೆ ಒಳಗಾಗಿದ್ದಾರೆ.