ಮಂಗಳೂರು, ಎ.15 (Daijiworld News/MB) : 27ರ ಹರೆಯದ ಸುರತ್ಕಲ್ನ ಯುವಕನೋರ್ವ ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಮಂಗಳವಾರ ಮೃತಪಟ್ಟಿದ್ದು ಮೃತದೇಹದ ಗಂಟಲ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾವಿಲ್ಲ ಎಂದು ದೃಡಪಟ್ಟಿದೆ. ಇದರಿಂದಾಗಿ ಜನರಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ.
27ರ ಹರೆಯದ ಯುವಕನಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಮನೆಮಂದಿ ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ನಲ್ಲಿ ಕರೆದೊಯ್ಯುವಾಗ ದಾರಿ ಮಧ್ಯೆಯೇ ಯುವಕ ಕೊನೆಯುಸಿರೆಳೆದಿದ್ದ.
ಕೊರೊನಾ ಲಕ್ಷಣಗಳಲ್ಲಿ ಒಂದಾದ ಉಸಿರಾಟದ ತೊಂದರೆ ಈ ಯುವಕನಿಗೆ ಇದ್ದ ಕಾರಣದಿಂದಾಗಿ ಮೃತ ಯುವಕನ ಗಂಟಲ ಮಾದರಿಯನ್ನು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದು ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ.
ಯುವಕನ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.