ಮಂಗಳೂರು, ಏ 15 (Daijiworld News/MSP): ಗಡಿಭಾಗ ತಲಪಾಡಿಯಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆದರೆ ಪೊಲೀಸ್ ವಶದಲ್ಲಿದ್ದ ಆರೋಪಿ ಠಾಣೆಯಿಂದಲೇ ಪರಾರಿಯಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಲಾಕ್ ಡೌನ್ ನಡುವೆ ತಲಪಾಡಿ ಸಮೀಪ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ನಸುಕಿನ ಜಾವ ಮರಳು ಅಡ್ಡೆಗೆ ದಾಳಿ ನಡೆಸಿ ಲಾರಿ ಸಮೇತ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ವಶಪಡಿಸಿಕೊಂಡ ಆರೋಪಿಯನ್ನು ಠಾಣೆಯೊಳಗೆ ಪೊಲೀಸರು ನಿಲ್ಲಿಸಿದ್ದರು. ಆದರೆ ಮುಖ ತೊಳೆಯುವ ನಾಟಕವಾಡಿದ ಆರೋಪಿ, ಅಲ್ಲಿಂದ ಹೊರಬಂದು ಓಡಿ ಪರಾರಿಯಾಗಿದ್ದಾನೆ. ಉಳ್ಳಾಲ ಠಾಣೆಯಲ್ಲೂ ಸಿಬ್ಬಂದಿ ಕಡಿಮೆಯಿದ್ದ ಆರೋಪಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ.