ದುಬೈ, ಸೆಪ್ಟಂಬರ್ 18: ಮಂಗಳೂರಿನ ಚೆಲುವೆ ಜೋಯ್ಸ್ ರೆಗೊ, ಸೆ22 ದೆಹಲಿಯಲ್ಲಿ ನಡೆಯಲಿರುವ ಮಿಸಸ್ಸ್ ಇಂಡಿಯಾ ಅರ್ತ್-2017 ಕೀರಿಟಕ್ಕಾಗಿ ರಾಂಪ್ ಮೇಲೆ ಹೆಜ್ಜೆಹಾಕಲಿದ್ದಾರೆ. 47 ಮಂದಿ ಸ್ಪರ್ಧಿಗಳೊಂದಿಗೆ ಅಂತಿಮ ಸುತ್ತಿನಲ್ಲಿ ವಿವಿಧ ಪ್ರಶಸ್ತಿಗಳಿಗಾಗಿ ಇತರರೊಂದಿಗೆ ಸ್ಪರ್ಧಿಸಲಿದ್ದಾರೆ. ಕಳೆದ 12 ವರ್ಷಗಳಿಂದ ಯುಎಇಯಲ್ಲಿ ವಾಸವಾಗಿರುವ ಜೋಯ್ಸ್ ದುಬೈಯಿಂದ ಅಂತಿಮ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಪಾಲ್ದನೆ ಜಾನ್ ಗುಡಿನ್ಹೋ ಮತ್ತು ಕ್ರಿಸ್ಟೀನ್ ಗುಡಿನ್ಹೋ ಅವರ ಸುಪುತ್ರಿಯಾಗಿರುವ ಜೋಯ್ಸ್ ಇಬ್ಬರು ಮಕ್ಕಳ ಮುದ್ದಿನ ತಾಯಿಯಾಗಿದ್ದಾರೆ. ಪ್ರಸ್ತುತ ದುಬೈನಲ್ಲಿ ಪತಿ ಜಾನ್ ರೆಗೊ ರೊಂದಿಗೆ ವಾಸವಾಗಿದ್ದಾರೆ.
ಸಮಾಜ ಕೆಳವರ್ಗದ ಕುಟುಂಬಗಳಿಗೆ ಮತ್ತು ಮಕ್ಕಳಿಗೆ ಸಹಾಯ ಮಾಡುವ ಕನಸು ಕಾಣುತ್ತಿದ್ದ ರೆಗೋ. ಇದೀಗ ಅದಕ್ಕೆ ಸೂಕ್ತ ವೇದಿಕೆ ದೊರೆಕಿದೆ ಎಂದು ಖುಷಿಪಡುತ್ತಾರೆ. ಪ್ರತಿ ಮಹಿಳೆಯೂ ಸುಂದರಿಯೇ, ಅದರೆ ಅದು ಶಾಶ್ವತವಾಗಿರಲು ತಮ್ಮನ್ನು ತಾವು ಪ್ರೀತಿಸುವುದನ್ನು ಕಲಿಯಬೇಕೆನ್ನುವು ಅವರ ಮಾತು.
ಇಂತಹ ಅಪೂರ್ವ ಅವಕಾಶಕ್ಕಾಗಿ ಭಗವಂತನಿಗೆ ವಿಶೇಷ ಕೃತಜ್ಞತೆ ಅರ್ಪಿಸೋ ಅವರು ಇಲ್ಲಿ ತಮ್ಮ ಪೋಷಕರು, ಪತಿ, ಮಕ್ಕಳು, ಕುಟುಂಬ ಮತ್ತು ಸ್ನೇಹಿತರ ಪ್ರೋತ್ಸಾಹವನ್ನು ಮರೆಯೋದಿಲ್ಲ.