ಮಂಗಳೂರು, ಎ.15 (DaijiworldNews/PY) : ನಗದು ದೊರೆಯುತ್ತದೆ ಎಂದು ಜನಜಂಗುಳಿ ಸೇರಿಕೊಂಡು ಲಾಕ್ ಡೌನ್ ಸಂಪೂರ್ಣ ಉಲ್ಲಂಘನೆಯಾದ ಘಟನೆ ಮಂಗಳೂರಿನ ನಗರದ ಕೂಳೂರಿನಲ್ಲಿ ನಡೆದಿದೆ.
ಕೂಳೂರಿನ ಶ್ರೀ ದೇವಿ ಪ್ರಸಾದ್ ಎಂಬ ಖಾಸಗಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಹಣ ಅಕೌಂಟ್ಗೆ ಹಾಕಲಾಗುತ್ತದೆ ಎಂದು ತಪ್ಪು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ 600-750 ಮಂದಿ ಗುಂಪು ಸೇರಿತ್ತು. ಯಾಕಾಗಿ ನಿಂತಿದ್ದೀರಿ ಎಂದು ಕೇಳಿದರೆ 'ನಮ್ಮ ಬ್ಯಾಂಕ್ ಖಾತೆಗೆ 2000 ರೂ. ಹಣ ಬರುತ್ತದೆ' ಎಂದು ನಾವೆಲ್ಲಾ ಬಂದು ನಿಂತಿದ್ದೇವೆ ಎಂದು ಸರತಿ ಸಾಲಿನಲ್ಲಿ ನಿಂತವರಿಂದ ಉತ್ತರ ಬರುತ್ತಿತ್ತು. ಯಾರು ಹೇಳಿದ್ದು ಎಂದರೆ, ಯಾರಿಂದಲೂ ನಿಖರವಾದ ಉತ್ತರ ಇಲ್ಲ.
ಎಲ್ಲರೂ ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಗಳನ್ನು ಹಿಡಿದುಕೊಂಡು ಸರತಿ ಸಾಲುಗಳಲ್ಲಿ ಮಧ್ಯಾಹ್ನ 11.30 ರಿಂದ 3.30 ರವರೆಗೆ ಜನ ಜಂಗುಳಿ ಸೇರಿತ್ತು. ಮಾಹಿತಿ ಪಡೆಯುವವರ ಬಳಿ ಯಾಕಾಗಿ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆ ಸಂಖ್ಯೆ ಪಡೆಯಲಾಗುತ್ತಿದೆ ಎಂದು ಕೇಳಿದರೆ, ನಮಗೆ ಡಿಸಿ ಕಚೇರಿಯಿಂದ ಕೂಲಿ ಕಾರ್ಮಿಕರ ಮಾಹಿತಿ ಪಡೆಯಲು ಹೇಳಿದ್ದಾರೆ. ಆದರೆ ಯಾರಿಗೂ 2000 ರೂ. ಬ್ಯಾಂಕ್ ಖಾತೆಗೆ ಹಾಕುತ್ತಿಲ್ಲ ಎಂಬ ಉತ್ತರ ಬಂತು. ಬಳಿಕ ಸ್ವಲ್ಪ ಹೊತ್ತಿನಲ್ಲಿ ಕಾರ್ಮಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಅವರನ್ನು ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿದ್ದು, ಅವರು ಕಾರು ಚಲಾಯಿಸಿ ಹೊರಟೇ ಹೋಗಿದ್ದಾರೆ. ಅಲ್ಲದೆ ಮಾಹಿತಿ ಪಡೆಯುವವರೂ ತಮ್ಮ ತಮ್ಮ ಬೈಕ್ ಏರಿ ಅಲ್ಲಿಂದ ಪರಾರಿ ಆಗಿದ್ದಾರೆ. ಒಟ್ಟಿನಲ್ಲಿ 2000 ಸಿಗುತ್ತದೆ ಎಂದು ಬಂದವರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮನೆ ದಾರಿ ಹಿಡಿದರು.
ಆದರೆ ಈ ಬಗ್ಗೆ ಪೊಲೀಸ್ ಇಲಾಖೆಗೆ, ಸ್ಥಳೀಯ ಕಾರ್ಪೊರೇಟರ್, ಮಹಾನಗರ ಪಾಲಿಕೆಯ ಆಯುಕ್ತರು ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಒಟ್ಟಿನಲ್ಲಿ ಲಾಕ್ ಡೌನ್ ಹಾಗೂ ಸಾಮಾಜಿಕ ಅಂತರ ಎರಡೂ ಉಲ್ಲಂಘನೆ ಆದದ್ದಂತೂ ಸತ್ಯ. ಈ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಿ, ಜನರಿಗೆ ತಪ್ಪು ಮಾಹಿತಿ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.