ಮಂಗಳೂರು, ಏ 15(DaijiworldNews/SM): ದ. ಕ. ಜಿಲ್ಲೆಯಲ್ಲಿ ಇದುವರೆಗೆ 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಆದರೆ, ಇವುಗಳಲ್ಲಿ ಬಹುತೇಕರು ಗುಣಮುಖರಾಗುವ ಮೂಲಕ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ 9 ಮಂದಿ ಗುಣಮುಖರಾಗಿದ್ದು, ಇನ್ನು ಮೂವರು ಮಾತ್ರವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರ ಗುಣಮುಖರಾಗುವ ನಿರೀಕ್ಷೆಗಳಿವೆ. ಇನ್ನು ಕಳೆದ 11 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಆ ಮೂಲಕ ಜಿಲ್ಲಾಡಳಿತ ಕೈಗೊಂಡ ಮುಂಜಾಗೃತ ಕ್ರಮಕ್ಕೆ ಫಲ ಸಿಕ್ಕಿದಂತಾಗಿದೆ.
ಬುಧವಾರ ಸುಮಾರು 42 ಮಂದಿಯ ಪರೀಕ್ಷಾ ಮಾದರಿಗಳು ಲಭ್ಯವಾಗಿದ್ದು, ಎಲ್ಲವೂ ನೆಗೆಟಿವ್ ಆಗಿದೆ. ಇನ್ನು ಇದೇ ದಿನ 15 ಮಂದಿಯನ್ನು ನಿಗಾದಲ್ಲಿರಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ದಿನದ ತನಕ 658 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರ ಪೈಕಿ 511 ಮಂದಿಯ ವರದಿ ಲಭ್ಯವಾಗಿದೆ. 498 ಮಂದಿಯ ವರದಿ ನೆಗೆಟಿವ್ ಆಗಿದೆ. ಇನ್ನು 25 ಮಂದಿ ಇ ಎಸ್ ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ಬುಧವಾರದಂದು 22 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ.