ಬೆಂಗಳೂರು , ಫೆ : ಫರ್ಜಿ ಕೆಫೆಯಲ್ಲಿ, ಶಾಸಕ ಎನ್ ಎ ಹ್ಯಾರಿಸ್ ಪುತ್ರ ನಲಪಾಡ್ ಮೊಹಮದ್ ನಿಂದ ತೀವ್ರ ಹಲ್ಲೆಗೊಳಗಾಗಿದ್ದ ಉದ್ಯಮಿ ಲೋಕನಾಥನ್ ಅವರ ಪುತ್ರ ವಿದ್ವತ್ ರನ್ನು ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಫೆಬ್ರವರಿ 17ರಂದು ರಾತ್ರಿ ಯುಬಿ ಸಿಟಿ ಕಟ್ಟಡದ ಫರ್ಜಿ ಕೆಫೆಯಲ್ಲಿ ನಲಪಾಡ್ ಹಾಗೂ ಆತನ ಸ್ನೇಹಿತರು ವಿದ್ವತ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದು ಆತನನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಹದಿನೈದು ದಿನಗಳಿಂದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ವತ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮಲ್ಯ ಆಸ್ಪತ್ರೆಯ ವೈದ್ಯ ಡಾ.ಆನಂದ್ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಅಧೀನ ನ್ಯಾಯಾಲಯದಲ್ಲಿ ಜಾಮೀನು ಸಿಗದ ಕಾರಣ, ಮತ್ತು ವಿದ್ವತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಹೊಂದಿದ ಕಾರಣ, ಮೊಹಮದ್ ನಲಪಾಡ್ ಜಾಮೀನಿಗಾಗಿ ಹೈಕೋರ್ಟ್ ಗೆ ಮೊರೆ ಹೋಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.