ಬೆಂಗಳೂರು, ಏ15 (Daijiworld News/MSP): ಶಿರ್ವ ಡಾನ್ ಬೊಸ್ಕೊ ಶಾಲೆಯ ಪ್ರಾಂಶುಪಾಲ, ಚರ್ಚ್ನ ಸಹಾಯಕ ಧರ್ಮಗುರು ಫಾ. ಮಹೇಶ್ ಡಿಸೋಜಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿತನಾಗಿರುವ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ.
ಫಾ. ಮಹೇಶ್ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳವಂತೆ ಪ್ರೇರೇಪಿಸಿದ ಆರೋಪದಡಿಯಲ್ಲಿ ಡೇವಿಡ್ ಡಿಸೋಜಾ ಅವರನ್ನು ಬಂಧಿಸಲಾಗಿತ್ತು. ಆರೋಪಿ ಪರ ಹೈಕೊರ್ಟ್ ನ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಮತ್ತು ರಕ್ಷಿತ್ ಕುಮಾರ್ ವಾದಿಸಿದ್ದರು.
ಮುದರಂಗಡಿ ಗ್ರಾಪಂ. ಅಧ್ಯಕ್ಷ ಡೇವಿಡ್ ಡಿಸೋಜಾ ಅವರ ಪತ್ನಿ ಜೊತೆ ಫಾ. ಮಹೇಶ್ ಡಿಸೋಜಾ ಅವರಿಗೆ ಸಂಪರ್ಕವಿದ್ದು ಇವರಿಬ್ಬರ ಮಧ್ಯೆ ನಿರಂತರ ಫೋನ್ ಸಂಭಾಷಣೆ, ಮೊಬೈಲ್ ಚಾಟಿಂಗ್ ನಡೆಯುತ್ತಿತ್ತು. ಇದನ್ನು ಗಮನಿಸಿ ಡೇವಿಡ್ ಫಾ.ಮಹೇಶ್ ರಿಗೆ ಬೆದರಿಕೆ ಹಾಕಿದ್ದ. ಇದು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ದೃಢಪಟ್ಟ ಆರೋಪದಡಿ ತನಿಖಾಧಿಕಾರಿ ಕಾಪು ವೃತ್ತ ನೀರಿಕ್ಷಕ ಮಹೇಶ ಪ್ರಸಾದ್ ಆರೋಪಿ ಡೇವಿಡ್ ಡಿಸೋಜಾನನ್ನು ಬಂಧಿಸಿದ್ದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಡೇವಿಡ್ ಡಿಸೋಜಾ ಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ.