ಮಂಗಳೂರು, ಮಾ 05 : ಬಿಜೆಪಿ ಮಾಡುತ್ತಿರುವುದು ಜನಸುರಕ್ಷಾ ಯಾತ್ರೆಯಲ್ಲ, ಕೋಮು ಉದ್ರೇಕಕಾರಿ ಯಾತ್ರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಿಡಿಕಾರಿದ್ದಾರೆ . ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾ. 05 ರ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಬಿಜೆಪಿಗೆ ಜನಸುರಕ್ಷಾ ಯಾತ್ರೆ ನಡೆಸುವ ನೈತಿಕತೆಯೇ ಇಲ್ಲ ಎಂದು ಹೇಳಿದರು. ಬಂಟ್ವಾಳ ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕೋಮುದ್ವೇಷದಲ್ಲಿ ಐದು ಕೊಲೆಗಳಾಗಿವೆ . ಅದರಲ್ಲಿ ನಾಲ್ಕು ಹತ್ಯೆಗಳಲ್ಲಿ ಬಿಜೆಪಿ, ಸಂಘ ಪರಿವಾರದ ಪಾತ್ರವಿದೆ. ಇನ್ನೊಂದು ಕೊಲೆಯಲ್ಲಿ ಬೇರೆ ಸಂಘಟನೆಯ ಪಾತ್ರವಿದೆ ಎಂದು ಬಿಜೆಪಿ ವಿರುದ್ದ ನೇರ ವಾಗ್ದಾಳಿ ನಡೆಸಿದರು.
ಬಿಜೆಪಿ ಯಾತ್ರೆ ನಡೆಸುತ್ತಿರುವುದು ಒಳ್ಳೆಯ ಉದ್ದೇಶಕ್ಕಾಗಿ ಅಲ್ಲ, ಕೇವಲ ಗಲಭೆ ಸೃಷ್ಟಿಸಲು ಮತ್ತು ಜನರ ದಿಕ್ಕು ತಪ್ಪಿಸಿ ಚುನಾವಣೆಯಲ್ಲಿ ಮತಗಳ ಲಾಭ ಪಡೆಯಲು ಅಷ್ಟೇ ಎಂದು ಹೇಳಿದರು. ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಹಾಗೂ ಅನಂತ್ ಕುಮಾರ್ ಹೆಗಡೆ ಕೋಮು ಉದ್ರೇಕಕಾರಿ ಭಾಷಣ ಮಾಡುತ್ತಾರೆ ಹೊರತು ಶಾಂತಿಗಾಗಿ ಮನವಿ ಮಾಡಿದ ಉದಾಹರಣೆಗಳಿಲ್ಲ ಎಂದು ಆರೋಪಿಸಿದರು.
ಉಳಿದಂತೆ ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಇಬ್ರಾಹಿಂ ಕೋಡಿಜಾಲ್ , ಶಶಿಧರ್ ಹೆಗ್ಡೆ , ಕವಿತಾ ಸನಿಲ್ , ಎ.ಸಿವಿನಯ್ ರಾಜ್ ಮುಂತಾದವರು ಹಾಜರಿದ್ದರು.