ಮಂಗಳೂರು, ಏ15 (Daijiworld News/MSP): ನೋಂದಣಿಗೊಳ್ಳದೆ ಸುರತ್ಕಲ್ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಖಾಸಗಿ ವೈದ್ಯರ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಕ್ಲಿನಿಕ್ ಗೆ ಬೀಗ ಜಡಿದಿದ್ದಾರೆ.
ಸುರತ್ಕಲ್ ನಲ್ಲಿದ್ದ ಶ್ರೀ ರಾಘವೇಂದ್ರ ಕ್ಲಿನಿಕ್ ಇದರ ನೋಂದಣಿ 2017ರಲ್ಲಿಯೇ ಮುಕ್ತಾಯವಾಗಿದ್ದು, ನಂತರ ನವೀಕರಣಗೊಳ್ಳದೆ ಕ್ಲಿನಿಕ್ ಕಾರ್ಯಾಚರಿಸುತ್ತಿತ್ತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ನಿರ್ದೇಶನದ ಮೇರೆಗೆ ಇಲಾಖೆಯ ಅಧಿಕಾರಿ ಡಾ.ಸಿಖಂದರ್ ಪಾಶಾ ಅವರು ಕ್ಲಿನಿಕ್ ಗೆ ದಾಳಿ ಮಾಡಿ, ಕ್ಲಿನಿಕನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಆಸ್ಪತ್ರೆ, ಕ್ಲಿನಿಕ್ , ಲ್ಯಾಬರೋಟರಿ, ಹೋಮಿಯೋಪತಿ , ಅಯುಷ್ ಕ್ಲಿನಿಕ್ ಪರವಾನಿಗೆ ನವೀಕರಣಗೊಳ್ಳದೆ/ ನೋಂದಣಿಗೊಳಿಸಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರೋಗ್ಯ ಇಲಾಖೆ ಸೂಚಿಸಿದೆ. ನವೀಕರಣ ಹಾಗೂ ನೋಂದಣಿ ಮಾಡದೆ ಇರುವ ಸಂಸ್ಥೆಗಳು ಕಾರ್ಯನಿರ್ವಹಿಸುವುದು ಕಂಡುಬಂದರೆ ಕೆಪಿಎಮ್ ಇ ಕಾಯಿದೆ ಹಾಗೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.