ಕಾಸರಗೋಡು, 16(DaijiworldNews/SM): ಕೇರಳದಲ್ಲಿ ಗುರುವಾರ ಏಳು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ ಕಾಸರಗೋಡಿನಲ್ಲಿ ಒಂದು ಪ್ರಕರಣ ಮಾತ್ರ ಪತ್ತೆಯಾಗಿದೆ.
ಕೇರಳದಲ್ಲಿ 27 ಮಂದಿ ಸೋಂಕು ಮುಕ್ತರಾಗಿದ್ದು, ಈ ಪೈಕಿ 24 ಮಂದಿ ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಕಾಸರಗೋಡಿನಲ್ಲಿ ದುಬೈಯಿಂದ ಬಂದಿದ್ದ ಚೆಮ್ನಾಡ್ ನ 20 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ.
ಮನೆಯಲ್ಲೇ ನಿಗಾದಲ್ಲಿದ್ದ ಯುವಕನನ್ನು ಸೋಂಕು ಪತ್ತೆಯಾದ ಹಿನ್ನೆಯಲ್ಲಿ ಉಕ್ಕಿನಡ್ಕದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ ಕಾಸರಗೋಡಿನಲ್ಲಿ 168 ಮಂದಿ ಕೊರೋನಾ ವೈರಸ್ ಗೆ ತುತ್ತಾಗಿದ್ದು, ಈ ಪೈಕಿ 61 ಮಂದಿ ಮಾತ್ರ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.
107 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ. ರಾಜ್ಯದಲ್ಲಿ 394 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 147 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರಗೋಡಿನಲ್ಲಿ ಸೋಂಕು ದೃಢಪಟ್ಟ 168 ಮಂದಿಯಲ್ಲಿ 103 ಮಂದಿ ವಿದೇಶದಿಂದ ಬಂದವರು. 65 ಮಂದಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗಲಿದೆ. ಐಸೋಲೇಷನ್ ವಾರ್ಡ್ ನಲ್ಲಿ 114 ಮಂದಿ ನಿಗಾದಲ್ಲಿದ್ದಾರೆ.
ಸೋಂಕು ಅತೀ ಹೆಚ್ಚು ಪತ್ತೆಯಾದ ಪ್ರದೇಶಗಳಲ್ಲಿನ 2851 ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಮೇ ಮೂರರ ತನಕ ಲಾಕ್ ಡೌನ್ ಕಟ್ಟುನಿಟಾಗಿ ಜಾರಿಯಲ್ಲಿರಲಿದೆ. ಇನ್ನು ಕಾಸರಗೋಡು ರೆಡ್ ಝೋನ್ ಎಂದು ಗುರುತಿಸಲಾಗಿದೆ.