ಬೈಂದೂರು, ಮಾ 05 : ಬಿಜೆಪಿಯ ಜನಸುರಕ್ಷಾ ಯಾತ್ರೆ ಮಾ. 05 ರ ಸೋಮವಾರ ಮುಂಜಾನೆ ಬೈಂದೂರಿನ ಶ್ರೀ ಶನೀಶ್ವರ ದೇವಸ್ಥಾನದ ಮುಂಭಾಗದಲ್ಲಿ ಹೊರಟಿತು. ಕೇಂದ್ರ ಸಚಿವೆ ಮೇನಕಾ ಗಾಂಧಿ ಯಾತ್ರೆಗೆ ಚಾಲನೆ ನೀಡಿದರು. ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮಂದಿ ಬಿಜೆಪಿ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ನು ನೂರಾರು ಕಾರ್ಯಕರ್ತರು ಪಾಲ್ಗೊಂಡು ರಾಜ್ಯ ಸರಕಾರದ ನೀತಿಗೆ ಧಿಕ್ಕಾರ ಕೂಗಿದರು. ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಕರ್ನಾಟಕದಲ್ಲಿ ಹತ್ಯೆ ಮಾಡಲಾಗುತ್ತಿದೆ. ಆದರೆ ರಾಜ್ಯ ಸರಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮನೇಕಾ ಗಾಂಧಿ ದೂರಿದರು. ಬಿಜೆಪಿ ಹಾಗೂ ಸಂಘಪರಿವಾರವು ಜೊತೆಗೂಡಿ ಯಾತ್ರೆಯಲ್ಲಿ ಕೈಜೋಡಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ಅಮಾಯಕ ಹತ್ಯೆ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಇದೇ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಮಠ- ಮಂದಿರ ವಶಪಡಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗುತ್ತಾರೆ. ಆದರೆ ಅನ್ಯ ಧರ್ಮದ ಧಾರ್ಮಿಕ ಕೇಂದ್ರಗಳ ವಿಷಯ ಬಂದಾಗ ಅವರ ಗಂಡಸ್ತನ ಎಲ್ಲಿಗೆ ಹೋಗಿರುತ್ತದೆ. ಸಿದ್ದರಾಮಯ್ಯ ಅವರ ಮೈಯಲ್ಲಿ ಟಿಪ್ಪು ಸುಲ್ತಾನ್ ರಕ್ತ ಹರಿಯುತ್ತಿದೆ, ಅದಕ್ಕೇ ಅವರು ಜಯಂತಿ ಆಚರಿಸುತ್ತಿದ್ದಾರೆ ಎಂದು ಕಿಡಿಕಾರಿದರು.