ಮಂಗಳೂರು, ಎ.16 (DaijiworldNews/PY) : ಕಾರ್ಪೊರೇಟರ್ಗಳು ಹಾಗೂ ಶಾಸಕರು ತಮ್ಮ ಕುಂದು-ಕೊರತೆಗಳತ್ತ ಗಮನ ಹರಿಸುತ್ತಿಲ್ಲ ಎಂದು ಪಚ್ಚನಾಡಿ ಕಾಲೊನಿಯಲ್ಲಿ ವಾಸಿಸುತ್ತಿರುವ ಚಿಂದಿ ಆಯುವ ಕುಟುಂಬಗಳು ಆರೋಪಿಸಿದ್ದಾರೆ.
ಪಚ್ಚನಾಡಿ ಕಾಲೊನಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಚಿಂದಿ ಆಯುವ ಕುಟುಂಬಗಳು ಡೇರೆಗಳಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಅಥವಾ ಮಂತ್ರಿಗಳು ತಮ್ಮ ಸಮಸ್ಯೆ ಬಗೆಹರಿಸಲು ನಮ್ಮ ಕಾಲೊನಿಗೆ ಭೇಟಿ ನೀಡಿಲ್ಲ ಎಂದು ಸಮುದಾಯ ಅರೋಪಿಸಿದೆ. ವರದಿಯ ಪ್ರಕಾರ, ಹಲವಾರು ವರ್ಷಗಳಿಂದ ಈ ಕಾಲೊನಿಯ ಜನರು ನೀರಿನ ಹಾಗೂ ವಸತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕಾಲೊನಿಯ ನಿವಾಸಿ ಜಾನಕಿ ದಾಯ್ಜಿವರ್ಲ್ಡ್ ಜೊತೆ ಮಾತನಾಡುತ್ತಾ, ನಮಗೆ ಸರ್ಕಾರದಿಂದ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ನಿರಾಕರಿಸಲಾಗಿದೆ. ಕಾರ್ಪೊರೇಟರ್ ಅಥವಾ ಶಾಸಕರು ನಮ್ಮ ಸಮಸ್ಯೆ ಬಗೆಹರಿಸಲು ಕಾಲೊನಿಗೆ ಭೇಟಿ ನೀಡಿಲ್ಲ. ನಾವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ, ಚಿಂದಿ ಆಯುವ ಮೂಲಕ ಮಾತ್ರವೇ ನಾವು ಹಣ ಗಳಿಸುತ್ತೇವೆ. ಇನ್ನು ಈ ಲಾಕ್ಡೌನ್ ನಡುವೆ ನಮಗೆ ಸರಿಯಾದ ಪಡಿತರವೂ ದೊರೆಯುತ್ತಿಲ್ಲ. ಇತ್ತೀಚೆಗೆ ನಮಗೆ ಒಂದು ಪ್ಯಾಕೇಟ್ ಬನ್ ನೀಡಿದ್ದರು. ಇಷ್ಟು ಮಾತ್ರವಲ್ಲದೇ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ ನಂತರ ನಾವು ನೀರಿನ ಸಮಸ್ಯೆಯನ್ನೂ ಎದುರಿಸುತ್ತಿದ್ದೇವೆ. ಆದರೆ, ಕಾರ್ಪೊರೇಟರ್ಗಳು ಮತಯಾಚನೆಗಾಗಿ ನಮ್ಮ ಬಳಿ ಬಂದು ನಮ್ಮ ಸಮಸ್ಯೆಗಳನ್ನು ಈಡೇರಿಸುವ ಭರವಸೆ ನೀಡುತ್ತಾರೆ. ಆದರೆ, ಒಮ್ಮೆ ಚುನಾವಣೆ ಮುಗಿದ ನಂತರ ನಮ್ಮ ಸಮಸ್ಯೆಯ ಬಗ್ಗೆ ಯೋಚಿಸುವುದೇ ಇಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಾಲೊನಿಯಾ ಇನ್ನೊಬ್ಬ ನಿವಾಸಿ ಯಶೋದಾ ಮಾತನಾಡಿ, ಕೆಲವು ಸಂಸ್ಥೆಗಳು ನಮಗೆ ಆಹಾರ ಕಿಟ್ ನೀಡಿದ್ದಾರೆ. ಆದರೆ, ಕಾರ್ಪೊರೇಟರ್ನಿಂದ ಯಾವುದೇ ಸಹಾಯ ದೊರೆತಿಲ್ಲ ಎಂದು ತಿಳಿಸಿದರು.
ಕಾರ್ಪೊರೇಟರ್ ಸಂಗೀತ ಆರ್ ನಾಯಕ್ ಮಾತನಾಡಿ, ನಮ್ಮ ವಾರ್ಡ್ ನ ಹೆಸರಾಂತ ಬೇಕರಿಯು ನಾವು ಅಗತ್ಯವಾದ ವಸ್ತುಗಳನ್ನು ನೀಡಿದ ನಂತರ ಬನ್ಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಅವರು ಬನ್ಗಳನ್ನು ಉಚಿತವಾಗಿ ತಯಾರಿಸಲು ಒಪ್ಪಿದ್ದು, ಅವುಗಳನ್ನು ನಮ್ಮ ವಾರ್ಡ್ ನಲ್ಲಿರುವ ಬಡವರಿಗೆ ವಿತರಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ನಡುವೆ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್ ವತಿಯಿಂದ 15 ಕೆಜಿ ಅಕ್ಕಿ ಮತ್ತು ದಾಲ್, ಸಕ್ಕರೆ, ಚಹಾ ಪುಡಿ, ಸೋಪ್, ಎಣ್ಣೆ, ಸಾಂಬಾರ್ ಪೌಡರ್, ಕರವಸ್ತ್ರ ಹಾಗೂ ಇತರ ಅನೇಕ ವಸ್ತುಗಳಿರುವ ಕಿಟ್ಗಳನ್ನು ವಿತರಿಸಿದೆ. ಅಲ್ಲದೇ, ಹಸಿರು ದಳ ಎಂಬ ಸಂಸ್ಥೆಯೂ ಇವರಿಗೆ 25 ಕೆಜಿ ಅಕ್ಕಿ ನೀಡಿದ್ದಾರೆ ಎಂದು ತಿಳಿಸಿದರು.
ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ ಎನ್ನುವ ಆರೋಪ ಸುಳ್ಳು. ಕಾಲೊನಿಯ ಇನ್ನೊಂದು ಬದಿಯಲ್ಲಿ ವಾಸಿಸುವ ನಾಗರಿಕ ಕಾರ್ಮಿಕರಿಂದ ನನಗೆ ದೂರುಗಳು ಬಂದಿವೆ. ಪರಿಶೀಲನೆ ನಡೆಸಿದ ಬಳಿಕ ಚಿಂದಿ ಆರಿಸುವ ಕಾರ್ಮಿಕರು ಮುಖ್ಯ ಪೈಪ್ಲೈನ್ನಿಂದ ನೀರು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ನೀರು ಸರಬರಾಜನ್ನು ನಿಲ್ಲಿಸಿದ್ದೇವೆ ಎಂದು ಕಾರ್ಪೊರೇಟರ್ ಸಂಗೀತ ಆರ್ ನಾಯಕ್ ಹೇಳಿದರು.