ಮಂಗಳೂರು, ಏ 16(DaijiworldNews/SM): ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ಸ್ತಬ್ಧಗೊಳಿಸಿದೆ. ವಿಶ್ವದೆಲ್ಲೆಡೆ ಜನರು ಭೀತಿಯಿಂದಲೇ ದಿನದೂಡುವಂತೆ ಮಾಡಿದೆ. ಇದೀಗ ಇದರ ಎಫೆಕ್ಟ್ ಹಲವಾರು ಕಂಪೆನಿಗಳ ಮೇಲೂ ತಟ್ಟಿದ್ದು, ವಿದೇಶದಲ್ಲಿರುವ ಕೆಲವು ಖಾಸಗಿ ಕಂಪೆನಿಗಳಲ್ಲಿರುವ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕೊಲ್ಲಿ ರಾಷ್ಟ್ರಗಳಾದ ಕುವೈಟ್, ಒಮಾನ್, ಬಹರೈನ್, ಕತಾರ್, ಸೌದಿ, ಯುಎಇ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಮೂಲದವರು ಉದ್ಯೋಗದಲ್ಲಿದ್ದಾರೆ. ಅದರಲ್ಲೂ ಕರಾವಳಿಗರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಕೆಲವು ಉದ್ಯೋಗಿಗಳಿಗೆ ಈಗಾಗಲೇ ಕಂಪೆನಿಗಳು ಗ್ರೀನ್ ಸಿಗ್ನಲ್ ನೀಡಿದೆ. ಲಾಕ್ ಡೌನ್ ಸಡಿಲಗೊಂಡು ವಿಮಾನಯಾನ ಆರಂಭಗೊಂಡ ಬಳಿಕ ತಮ್ಮ ತಾಯ್ನಾಡಿಗೆ ತೆರಳುವಂತೆ ಕಂಪೆನಿಗಳೇ ಸೂಚಿಸಿವೆ ಎಂಬ ಬಗ್ಗೆ ಕೆಲವು ಉದ್ಯೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಇನ್ನು ಇದರಲ್ಲಿ ಅಧಿಕ ಸಂಖ್ಯೆಯಲ್ಲಿ ಕುವೈಟ್ ನಲ್ಲಿರುವ ಉದ್ಯೋಗಿಗಳು ಉದ್ಯೋಗ ನಷ್ಟದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನವೇ ಕೆಲವೊಂದು ಕಂಪೆನಿಗಳು ಭಾರತೀಯರನ್ನು ಉದ್ಯೋಗದಿಂದ ತೆರವುಗಳಿಸಿವೆ. ಈ ನಡುವೆ ಮಹಾಮಾರಿ ಕೊರೊನಾದಿಂದಾಗಿ ಮತ್ತಷ್ಟು ನಷ್ಟವುಂಟಾಗಿದ್ದು, ಈ ಹಿನ್ನೆಲೆಯಲ್ಲಿ ಕಂಪೆನಿಗಳು ತಮ್ಮ ದಿಟ್ಟ ನಿರ್ಧಾರಗಳನ್ನು ಕೈಗೊಂಡಿವೆ. ಅದರಲ್ಲೂ ವಿಮಾನಯಾನ ಸಂಸ್ಥೆಯಲ್ಲಿದ್ದವರು ಅಧಿಕ ಸಂಖ್ಯೆಯಲ್ಲಿ ಉದ್ಯೋಗ ನಷ್ಟಕ್ಕೆ ಒಳಗಾಗಲಿದ್ದಾರೆ ಎಂಬುವುದಾಗಿ ಅನಿವಾಸಿ ಉದ್ಯಮಿಯೊಬ್ಬರು ತಿಳಿಸಿದ್ದಾರೆ.
ಈಗಾಗಲೇ ಸುಮಾರು 15 ಲಕ್ಷದಷ್ಟು ಮಂದಿ ವಿವಿಧ ಉದ್ಯೋಗದಲ್ಲಿ ಅರಬ್ ರಾಷ್ಟ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿದ್ದಾರೆ. ಆದರೆ, ಕೊರೊನಾ ಮಹಾಮಾರಿ ಈ ಕಂಪೆನಿಗಳ ಮೇಲೆ ಕರಿ ನೆರಳನ್ನು ಬೀರಿದೆ. ಕಂಪನಿಗಳು ಕೈ ಚೆಲ್ಲಿ ಕುಳಿತಿವೆ. ವೇತನ, ಉದ್ಯೋಗ ಇಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಕಾರಣ ಅಧಿಕ ವೇತನವನ್ನು ಪಡೆಯುತ್ತಿರುವ ಭಾರತೀಯರನ್ನೇ ಕಂಪೆನಿಗಳು ಪ್ರಮುಖವಾಗಿ ಪರಿಗಣಿಸಿ ಉದ್ಯೋಗದಿಂದ ತೆರವುಗೊಳಿಸುವ ಪ್ಲಾನ್ ಮಾಡಿದ್ದಾರೆ.
ಇನ್ನು ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯಮ ನಡೆಸುತ್ತಿರುವ ಭಾರತೀಯರು ಕೂಡ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಉದ್ಯಮ ನಡೆಸಲು ಅಸಾಧ್ಯವೆಂಬ ಪರಿಸ್ಥಿತಿಗೆ ತಲುಪಿದ್ದಾರೆ. ಇವೆಲ್ಲವುಗಳು ಭಾರತದ ಅರ್ಥ ವ್ಯವಸ್ಥೆಗೆ ನೇರ ಪರಿಣಾಮ ಬೀರಲಿದ್ದು, ದೊಡ್ಡ ಹೊಡೆತವಾಗಲಿದೆ. ಉದ್ಯೋಗ ನಷ್ಟಕ್ಕೊಳಗಾಗುವವರು ಪರ್ಯಾಯ ಮಾರ್ಗ ಹುಡುಕಾಟದಲ್ಲಿ ತೊಡಗಿದ್ದಾರೆ.